ನವದೆಹಲಿ /ಗ್ರೇಟರ್ ನೋಯ್ಡಾ :ಪ್ರೀತಿಗಾಗಿಗಡಿ ದಾಟಿ ಭಾರತಕ್ಕೆ ಬಂದ ಸೀಮಾ ಗುಲಾಂ ಹೈದರ್‌ಳನ್ನು ಉತ್ತರಪ್ರದೇಶದ ವಿಶೇಷ ಪೊಲೀಸ್ ಪಡೆ ( ಎಟಿಎಸ್) ತೀವ್ರ ವಿಚಾರಣೆಗೆ ಒಳಪಡಿಸಿದೆ. ಉತ್ತರಪ್ರದೇಶ ಎಟಿಎಸ್ ಸೀಮಾ ಮತ್ತು ಆಕೆಯ ಪ್ರೇಮಿ ಸಚಿನ್ ಅವರನ್ನು ಪ್ರಶ್ನಿಸಲು ಪ್ರಾರಂಭಿಸಿದೆ. ಎಟಿಎಸ್ ಸೋಮವಾರ ಸೀಮಾ, ಪ್ರೇಮಿ ಸಚಿನ್ ಮೀನಾ ಮತ್ತು ಸಚಿನ್ ತಂದೆ ನೇತ್ರಪಾಲ್ ಅವರನ್ನು ರಬೂಪುರದಿಂದ ನೋಯ್ಡಾಕ್ಕೆ ವಿಚಾರಣೆಗಾಗಿ ಕರೆದೊಯ್ದಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ ಮೂವರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಮೂಲಗಳ ಪ್ರಕಾರ, ಉತ್ತರಪ್ರದೇಶ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ 10 ದಿನಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದೆ. ಈ ಸಂದರ್ಭದಲ್ಲಿ, ಸೀಮಾ ಹೈದರಳ ಜೀವನ ಮತ್ತು ಮಾತನಾಡುವ ಶೈಲಿಯ ಬಗ್ಗೆ ಕಠಿಣ ವಿಶ್ಲೇಷಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಅಷ್ಟಕ್ಕೂ ಅವರು ಯಾರು? ನೀವು ಪಾಕಿಸ್ತಾನದಲ್ಲಿ ಏನು ಮಾಡುತ್ತಿದ್ದಿರಿ? ಭಾರತಕ್ಕೆ ಹೇಗೆ ಬಂದಿರಿ? ನಿಮಗೆ ಇಲ್ಲಿಗೆ ಬರಲು ಯಾರು ಸಹಾಯ ಮಾಡಿದರು? ಎಂಬ ಅಂಶಗಳ ಆಧಾರದ ಮೇಲೆ ಪ್ರಶ್ನೆಗಳ ಸುರಿಮಳೆಯನ್ನು ಹರಿಸುವ ಸಾಧ್ಯತೆಗಳಿವೆ. ಒಂದೊಮ್ಮೆ ಹೆಚ್ಚುವರಿ ಅಗತ್ಯ ಬಿದ್ದರೆ, ಅವರನ್ನು ಲಖನೌದ ಪ್ರಧಾನ ಕಚೇರಿಗೆ ಕರೆಯಿಸಿಕೊಂಡು ವಿಚಾರಣೆಗೆ ಒಳಪಡಿಸಬಹುದು ಎಂದು ಎಟಿಎಸ್ ಮೂಲಗಳು ಹೇಳಿವೆ ಎಂದು ವರದಿಯಾಗಿದೆ. ಆದರೆ ಯುಪಿ ಎಟಿಎಸ್ ನಿಂದ ಹೈದರ್ ವಿಚಾರಣೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ಪೊಲೀಸರು ನಿರಾಕರಿಸಿದ್ದಾರೆ.
ಮೇ 13 ರಂದು ನೇಪಾಳದ ಮೂಲಕ ಭಾರತ ಪ್ರವೇಶ : ಪಾಕಿಸ್ತಾನದ ಕರಾಚಿ ಗಡಿ ನಿವಾಸಿ ಮೇ 13 ರಂದು ನೇಪಾಳದ ಮೂಲಕ ಭಾರತವನ್ನು ಅಕ್ರಮವಾಗಿ ತಲುಪಿದ್ದಾರೆ. ಇದಾದ ನಂತರ ರಬೂಪುರದಲ್ಲಿರುವ ಸಚಿನ್ ಮನೆಯಲ್ಲಿ ವಾಸ ಮಾಡತೊಡಗಿದ್ದರು. ಜೊತೆಗೆ ನಾಲ್ಕು ಮಕ್ಕಳನ್ನೂ ಕರೆದುಕೊಂಡು ಬಂದಿದ್ದಾರೆ. ಸುಮಾರು ಒಂದೂವರೆ ತಿಂಗಳ ಕಾಲ ರಬೂಪುರದ ಬಾಡಿಗೆ ಮನೆಯಲ್ಲಿ ಸೀಮಾ ಹಾಗೂ ಆಕೆಯ ನಾಲ್ವರು ಮಕ್ಕಳನ್ನು ಸಚಿನ್ ಇರಿಸಿದ್ದರು. ಅಷ್ಟರಲ್ಲಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಹುಡುಕಾಟ ಆರಂಭಿಸಿದಾಗ ಸೀಮಾ ತನ್ನ ಮಕ್ಕಳು ಮತ್ತು ಸಚಿನ್ ಸಮೇತ ಅಲ್ಲಿಂದ ಪರಾರಿಯಾಗಿದ್ದರು. ನಂತರ ನೋಯ್ಡಾ ಪೊಲೀಸರು, ಹರಿಯಾಣದ ಫರಿದಾಬಾದ್‌ನಿಂದ ಹೈದರ್, ಆಕೆಯ ಪ್ರಿಯಕರ ಮತ್ತು ಪ್ರಿಯಕರನ ತಂದೆ ನೇತ್ರಪಾಲ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದೀಗ ಜಾಮೀನು ಪಡೆದು ರಬೂಪುರದಲ್ಲಿರುವ ಸಚಿನ್ ಮನೆಯಲ್ಲಿ ಹೈದರ್ ವಾಸವಾಗಿದ್ದಾಳೆ.