ಮಾಲ್ಡಾ (ಪಶ್ಚಿಮ ಬಂಗಾಳ): ಸ್ವಾಮಿ ವಿವೇಕಾನಂದರ 161ನೇ ಜಯಂತಿ ನಿಮಿತ್ತ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ ಕಪಿಲ್ ಮೊರೇಶ್ವರ್ ಪಾಟೀಲ್ ಗುರುವಾರ ಸ್ವಾಮಿ ವಿವೇಕಾನಂದರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಇಡೀ ದೇಶವೇ ಸ್ವಾಮಿ ವಿವೇಕಾನಂದರಿಗೆ ನಮನ ಸಲ್ಲಿಸಿತು. ಆದರೆ, ಕೇಂದ್ರ ಸಚಿವರು ಮಾಲಾರ್ಪಣೆಗೆ ಭಾರಿ ವಿವಾದಕ್ಕೆ ನಾಂದಿ ಹಾಡಿದ್ದು, ಕೇಂದ್ರ ಸಚಿವ ಮೊರೇಶ್ವರ್ ಪಾಟೀಲ್ ಅವರು ಪಾದರಕ್ಷೆನಗಳನ್ನು ಧರಿಸಿ ಸ್ವಾಮಿ ವಿವೇಕಾನಂದ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿದೆ.
ಕಾರ್ಯಕ್ರಮದ ನಂತರ ಪಶ್ಚಿಮ ಬಂಗಾಳದ ರಾಜ್ಯದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮಾಲ್ಡಾದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಸ್ಮರಣಾರ್ಥವಾಗಿ ನಗರದಲ್ಲಿ ಮೆರವಣಿಗೆ ನಡೆಯಿತು. ಮಾಲ್ಡಾ ನಗರದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಕಪಿಲ್ ಮೊರೇಶ್ವರ ಪಾಟೀಲ್ ಅವರು ಬೃಹತ್ ಮೆರವಣಿಗೆ ಬಳಿಕ ರಾಮಕೃಷ್ಣ ಮಿಷನ್ ತಲುಪಿದ್ದಾರೆ.
ರಾಮಕೃಷ್ಣ ಮಿಷನ್ನಲ್ಲಿ ಪುಷ್ಪಾರ್ಚನೆ ಮಾಡಿದ ನಂತರ ಕೇಂದ್ರ ಸಚಿವರು ಪಾದರಕ್ಷೆ ಧರಿಸಿ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು ಎಂದು ಆರೋಪ ಕೇಳಿ ಬಂದಿದೆ. ಈ ಘಟನೆಯಿಂದಾಗಿ ಟಿಎಂಸಿ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರದ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಜಿಲ್ಲಾ ತೃಣಮೂಲ ವಕ್ತಾರ ಶುಭಮೋಯ್ ಬಸು, ಕೇಂದ್ರ ಸಚಿವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವುದರ ಹಿಂದಿನ ಏಕೈಕ ಉದ್ದೇಶ ಎಂದರೆ ಅದು ರಾಜಕೀಯ ಪ್ರವಾಸೋದ್ಯಮವಾಗಿದೆ ಎಂದು ಆರೋಪಿಸಿದ್ದಾರೆ. ಸಚಿವರಿಗೆ ರಾಜ್ಯದ ಸಂಪ್ರದಾಯ ಮತ್ತು ಸಂಸ್ಕೃತಿಯ ಬಗ್ಗೆ ಅರಿವಿಲ್ಲ ಎಂದು ಟೀಕಿಸಿದ್ದಾರೆ.