ನವದೆಹಲಿ:ಎರಡನೇ ಹಂತದ ಕೋವಿಡ್ ಅಲೆ ಹತೋಟಿಗೆ ಬರುವ ಯಾವುದೇ ಲಕ್ಷಣ ಗೋಚರವಾಗಿ ಕಂಡು ಬರುತ್ತಿಲ್ಲ. ಕಳೆದ ಕೆಲ ದಿನಗಳ ಹಿಂದೆ ನಿಯಂತ್ರಣದಲ್ಲಿದ್ದ ಕೋವಿಡ್ ಇದೀಗ ಕೆಲವೊಂದು ರಾಜ್ಯಗಳಲ್ಲಿ ದಿಢೀರ್ ಆಗಿ ಉಲ್ಭಣಗೊಂಡಿದ್ದು, ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಇದರ ಆರ್ಭಟ ಮತ್ತಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾತನಾಡಿದ್ದು, ದೇಶದ 10 ರಾಜ್ಯಗಳಲ್ಲಿ ಕೊರೊನಾ ವೈರಸ್ ಏರಿಕೆಯಾಗುತ್ತಿದ್ದು, ಶೇ. 80ರಷ್ಟು ಪ್ರಕರಣಗಳು ಇಲ್ಲಿ ಕಂಡು ಬರುತ್ತಿವೆ. ಅದರ ನಿಯಂತ್ರಣಕ್ಕಾಗಿ ಇಂದು ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಾಗಿದೆ ಎಂದರು.
ಕೋವಿಡ್ ಸೋಂಕಿತ ಪ್ರಕರಣ ಹೆಚ್ಚುತ್ತಿರುವ ಕಾರಣದಿಂದಾಗಿ ಕೇಂದ್ರ ಸರ್ಕಾರ 10 ರಾಜ್ಯಗಳಲ್ಲಿನ ಕೋವಿಡ್ ಪರಿಸ್ಥಿತಿ ಪರಿಶೀಲಿಸಿದೆ. ಪ್ರಮುಖವಾಗಿ ಕೇರಳ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಅಸ್ಸೋಂ, ಮಿಜೋರಾಂ, ಮೇಘಾಲಯ, ಮಣಿಪುರ್ ರಾಜ್ಯಗಳಲ್ಲಿ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು, ಮತ್ತಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ತರಲು ನೆರೆಹೊರೆ, ಸಮುದಾಯ, ಗ್ರಾಮ, ಮೊಹಲ್ಲಾ, ವಾರ್ಡ್ಗಳಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಅವಶ್ಯಕವಾಗಿದೆ ಎಂದು ರಾಜೇಶ್ ಭೂಷಣ್ ತಿಳಿಸಿದ್ದಾರೆ.