ಭುವನೇಶ್ವರ (ಒಡಿಶಾ) :ಇಬ್ಬರು ಬಾಲಕಿಯರನ್ನು ಅಪಹರಿಸಿ ಅತ್ಯಾಚಾರ ಎಸಗಿ, ಸಂತ್ರಸ್ತೆಯರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ ಒಡಿಶಾದಲ್ಲಿ ನಡೆದಿದೆ. ಪ್ರತ್ಯೇಕ ಪ್ರಕರಣದಲ್ಲಿ ಗುಜರಾತ್ನ ರಾಜ್ಕೋಟ್ನಲ್ಲಿ 8 ನೇ ತರಗತಿ ವಿದ್ಯಾರ್ಥಿನಿ ಒಬ್ಬಳು ಏಕಾಏಕಿ ಮೃತಪಟ್ಟಿರುವುದು ತಿಳಿದು ಬಂದಿದೆ. ಇದಕ್ಕೆ ಪೋಷಕರು ಶಾಲೆಗೆ ಸ್ವೆಟರ್ ಹಾಕಲು ಶಾಲಾ ಆಡಳಿತ ಮಂಡಳಿ ಅವಕಾಶ ನೀಡದಿರುವುದೇ ಕಾರಣ ಎಂದು ದೂರಿದ್ದಾರೆ.
ಅತ್ಯಾಚಾರ ಪ್ರಕರಣ: ಪಾಟಿಯಾ ರೈಲು ನಿಲ್ದಾಣದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಎರಡು ಜನ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಸೋಮವಾರ ನಡೆದಿದೆ. ಮಂಗಳವಾರ ಅವರ ಪೋಷಕರು ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿ ಕುಶುನ ಚಂದ್ರ ಮಲ್ಲಿಕಾ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪಾಟಿಯಾ ಪ್ರದೇಶದಲ್ಲಿ ವಾಸವಾಗಿದ್ದ ಇಬ್ಬರು 12 ಮತ್ತು 14ವರ್ಷದ ಯುವತಿಯರು ಸೋಮವಾರ ಸಂಜೆ ಪಾಟಿಯಾ ರೈಲು ನಿಲ್ದಾಣಕ್ಕೆ ಹೋಗಿದ್ದಾರೆ. ಈ ವೇಳೆ, ಇಬ್ಬರು ಹುಡುಗರು ಅವರನ್ನು ಅಪಹರಿಸಿ ರೈಲ್ವೆ ಮೇಲ್ಸೇತುವೆಗೆ ಕರೆದೊಯ್ದಿದು ಹಗ್ಗದಿಂದ ಕಟ್ಟಿ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಇತರರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಮಂಗಳವಾರ ಬೆಳಗ್ಗೆ ಬಿಡುಗಡೆಗೊಂಡ ಬಾಲಕಿಯರು ಮನೆಗೆ ಬಂದ ಬಳಿಕ ತಮ್ಮ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಇದನ್ನು ತಿಳಿದ ಆರೋಪಿಗಳು ಸಂಸ್ರಸ್ತೆಯರ ಮನೆಗೆ ಬಂದು ಸಂಧಾನಕ್ಕೆ ಪ್ರಯತ್ನಿಸಿದ್ದಾರೆ ಮತ್ತು ಹಣ ಕೊಟ್ಟು ಪ್ರಕರಣ ಮುಚ್ಚಿ ಹಾಕುವಂತೆ ಬೆದರಿಸಿದ್ದಾರೆ. ಆದರೆ, ಸಂತ್ರಸ್ತ ಬಾಲಕಿಯರ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.