ಕೋಯಿಕ್ಕೋಡ್ (ಕೇರಳ):ನಿಫಾ ವೈರಸ್ ತಗುಲಿ ಕೇರಳದಲ್ಲಿ 12 ವರ್ಷದ ಬಾಲಕ ಮೃತಪಟ್ಟ ಬೆನ್ನಲ್ಲೇ ಇಬ್ಬರು ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕಿನ ಲಕ್ಷಣ ಕಂಡು ಬಂದಿವೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಇಂದು ಬೆಳಗ್ಗೆ ನಿಫಾ ವೈರಸ್ನಿಂದ ಮೃತಪಟ್ಟ ಈ ಬಾಲಕನ ಜೊತೆ 12 ದಿನಗಳಿಂದ ಸಂಪರ್ಕಕ್ಕೆ ಬಂದಿದ್ದ 188 ಮಂದಿಯನ್ನು ನಾವು ಗುರುತಿಸಿದ್ದೇವೆ. ಅದರಲ್ಲಿ 20 ಜನರು ಹೆಚ್ಚಿನ ಅಪಾಯದ ಸಂಪರ್ಕಗಳಾಗಿದ್ದು, ಇವರಲ್ಲಿ ಇಬ್ಬರು ರೋಗಲಕ್ಷಣಗಳನ್ನು ಹೊಂದಿದ್ದಾರೆ.
ಇವರಿಬ್ಬರೂ ಆರೋಗ್ಯ ಕಾರ್ಯಕರ್ತರಾಗಿದ್ದಾರೆ. ಒಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ, ಮತ್ತೊಬ್ಬರು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಿಬ್ಬಂದಿಯಾಗಿದ್ದಾರೆ ಎಂದು ಸಚಿವೆ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಓದಿಗೆ: ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ.. ವೈರಸ್ಗೆ 12 ವರ್ಷದ ಬಾಲಕ ಬಲಿ
ಪರಿಸ್ಥಿತಿಯ ಅವಲೋಕನಕ್ಕಾಗಿ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೀಣಾ ಜಾರ್ಜ್, ಹೆಚ್ಚಿನ ಅಪಾಯದ ಸಂಪರ್ಕ ಎಂದು ಪರಿಗಣಿಸಲಾಗಿರುವ 20 ಜನರನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಕಳುಹಿಸಿ ಅವರ ಮೇಲೆ ನಿಗಾವಹಿಸಲಾಗುವುದು. ಆಸ್ಪತ್ರೆಯ ಒಂದು ವಾರ್ಡ್ ಅನ್ನು ಸಂಪೂರ್ಣ ನಿಫಾ ವಾರ್ಡ್ ಆಗಿ ಪರಿವರ್ತಿಸಲಾಗಿದೆ ಎಂದು ಹೇಳಿದ್ದಾರೆ.