ಸೀತಾಮರ್ಹಿ (ಬಿಹಾರ): ಜೆಡಿಯು ಸಂಸದ ಸುನಿಲ್ ಕುಮಾರ್ ಪಿಂಟು ಅವರಿಂದ ಎರಡು ಕೋಟಿ ರೂಪಾಯಿ ಹಣ ಸುಲಿಗೆಗೆ ಯುವತಿಯೊಬ್ಬಳು ಬೇಡಿಕೆ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಣ ನೀಡದಿದ್ದರೆ ವಿಡಿಯೋ ಹಾಗೂ ಫೋಟೋಗಳು ವೈರಲ್ ಮಾಡುವುದಾಗಿಯೂ ಯುವತಿ ಬೆದರಿಕೆ ಹಾಕಿದ್ದಾಳೆ. ಈ ಬೆದರಿಕೆ ಕರೆ ಬಂದ ತಕ್ಷಣವೇ ಸಂಸದರು ಪಾಟ್ನಾದ ಶಾಸ್ತ್ರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮೂರು ವಿವಿಧ ಸಂಖ್ಯೆಗಳಿಂದ ಸೀತಾಮರ್ಹಿ ಕ್ಷೇತ್ರದ ಸಂಸದರಾದ ಸುನಿಲ್ ಕುಮಾರ್ ಪಿಂಟು ಅವರಿಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದೆ. ಯುವತಿ ಹೊರತಾಗಿ ಇನ್ನೂ ಹಲವರು ಬೆದರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಬೇಡಿಕೆ ಇಟ್ಟವರು ಹಣ ನೀಡದಿದ್ದರೆ ವಿಡಿಯೋ ಹಾಗೂ ಫೋಟೋಗಳನ್ನು ಇಂಟರ್‌ನೆಟ್‌ನಲ್ಲಿ ವೈರಲ್ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಕುಟುಂಬದ ಸದಸ್ಯರಿಗೂ ಆ ವಿಡಿಯೋ ಮತ್ತು ಫೋಟೋಗಳು ವೈರಲ್ ಮಾಡುವುದಾಗಿ ವಂಚಕರು ಬೆದರಿಸುತ್ತಿದ್ದಾರೆ ಎಂದು ಸಂಸದ ಸುನಿಲ್ ಕುಮಾರ್ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ:ರಾಹುಲ್ ಹೇಳಿದ್ದು ಕೇರಳದ ಮುಸ್ಲಿಂ ಲೀಗ್ ಬಗ್ಗೆ.... ಜಿನ್ನಾ ಮುಸ್ಲಿಂ ಲೀಗ್ ಜೊತೆ ಸರ್ಕಾರ ರಚಿಸಿದ್ದ ಶ್ಯಾಮ ಪ್ರಸಾದ್: ಕಾಂಗ್ರೆಸ್ ತಿರುಗೇಟು
ಈ ಫೋಟೋಗಳು ಮತ್ತು ವಿಡಿಯೋಗಳನ್ನು ಎಡಿಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಫೋಟೋಗಳನ್ನು ಸಂಸದ ಸುನಿಲ್ ಕುಮಾರ್ ಪಿಂಟು ಅವರ ಸೋಷಿಯಲ್ ಮೀಡಿಯಾ ಅಂಕೌಟ್ಗಳಿಂದ ತೆಗೆದುಕೊಳ್ಳಲಾಗಿದೆ. ಇದರ ಹಿಂದೆ ಸೈಬರ್ ಕ್ರಿಮಿನಲ್‌ಗಳ ಕೈವಾಡವಿದೆ ಎಂದು ದೂರಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಶಾಸ್ತ್ರಿನಗರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಂಸದರಿಗೆ ಬಂದ ಎಲ್ಲ ಬೆದರಿಕೆ ಕರೆಗಳು ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಈಗಾಗಲೇ ಎಲ್ಲ ನಂಬರ್ಗಳ ಟವರ್ ಲೊಕೇಶನ್ ಪತ್ತೆ ಹಚ್ಚಿದ್ದಾರೆ. ಸಂಸದರಿಗೆ ಬೆದರಿಕೆ ಹಾಕಿರುವ ಸಂಖ್ಯೆಗಳು ಬಿಹಾರದ ಹೊರಗಿನಿಂದ ಬಂದಿವೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಪ್ರಾಥಮಿಕವಾಗಿ ಈ ಕೆಲಸವು ಸೈಬರ್ ಅಪರಾಧಿಗಳದ್ದು, ಆದರೆ, ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸಂಪೂರ್ಣವಾಗಿ ಬಹಿರಂಗವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಕೂಡ ಸಂಸದ ಸುನೀಲ್ ಕುಮಾರ್ ಪಿಂಟು ಅವರಿಗೆ ಸೈಬರ್ ವಂಚಕರು ಮೋಸ ಮಾಡಿದ್ದರು. 2022ರಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಹೆಸರಿನಲ್ಲಿ ಸಂಸದರ ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸುವ ಮೂಲಕ ದುಷ್ಕರ್ಮಿಗಳು ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಸಂಸದರು ಲೋಕಸಭೆ ಸ್ಪೀಕರ್ ಕಚೇರಿಗೆ ಮಾಹಿತಿ ನೀಡಿದ ನಂತರ ತನಿಖೆ ಕೈಗೊಳ್ಳಲಾಗಿತ್ತು. ಆಗ ತನಿಖೆಯಲ್ಲಿ ಸಂಪೂರ್ಣ ವಿಷಯ ಬಹಿರಂಗವಾಗಿ ಇದೊಂದು ಸೈಬರ್ ವಂಚಕರ ಕೃತ್ಯ ಎಂದು ಬಯಲಿಗೆ ಬಂದಿತ್ತು.
ಇದನ್ನೂ ಓದಿ:ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡ ಪತ್ರಕರ್ತೆ: ತಮ್ಮ ಕಾರು ಕೊಟ್ಟು ಬೈಕ್ನಲ್ಲಿ ತೆರಳಿದ ಸಿಎಂ ಮಮತಾ