ಹೈದರಾಬಾದ್:ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿಗಾಗಿ ನಡೆಸಿದ ತೆಲಂಗಾಣ ರಾಜ್ಯ ಲೋಕಸೇವಾ ಆಯೋಗದ (ಟಿಎಸ್‌ಪಿಎಸ್‌ಸಿ) ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮತ್ತೊಂದು ಹೊಸ ಅಂಶ ಬೆಳಕಿಗೆ ಬಂದಿದೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪಿಗಳಲ್ಲಿ ಒಬ್ಬರು ಪರೀಕ್ಷೆ ಹಾಜರಾಗುವ ಅಭ್ಯರ್ಥಿಗಳೊಂದಿಗೆ ಉತ್ತರಗಳನ್ನು ಹಂಚಿಕೊಳ್ಳಲು ಚಾಟ್‌ಜಿಪಿಟಿ ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿದ್ದಾರೆ ಎಂದು ಕಂಡು ಹಿಡಿದಿದೆ.
ತೆಲಂಗಾಣ ರಾಜ್ಯ ನಾರ್ದರ್ನ್ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್ (TSNPDCL)ನ ವಿಭಾಗೀಯ ಇಂಜಿನಿಯರ್ ಆಗಿರುವ ಪೂಲಾ ರಮೇಶ್ ಅವರು ಸಹಾಯಕ ಇಂಜಿನಿಯರ್ (ಸಿವಿಲ್) ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡಿದ್ದಾರೆ ಮತ್ತು ಇತ್ತೀಚಿನ AI ಉಪಕರಣ ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಸಹ ಬಳಸಿದ್ದಾರೆ ಎಂದು ಎಸ್‌ಐಟಿ ತನಿಖೆಯಿಂದ ತಿಳಿದು ಬಂದಿದೆ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಮತ್ತು ವಿಭಾಗೀಯ ಲೆಕ್ಕಪತ್ರ ಅಧಿಕಾರಿ (DAO) ಪರೀಕ್ಷೆಗಳನ್ನು ಬರೆಯುವ ಕೆಲವು ಅಭ್ಯರ್ಥಿಗಳಿಗೆ ಸಹಾಯ ಮಾಡಿದ್ದರು ಎನ್ನಲಾಗಿದೆ.
ಚಾಟ್‌ಜಿಪಿಟಿ ಬಳಕೆ ಇದೇ ಮೊದಲು: ಪರೀಕ್ಷಾ ಹಾಲ್‌ನಲ್ಲಿರುವ ಕನಿಷ್ಠ ಏಳು ಅಭ್ಯರ್ಥಿಗಳೊಂದಿಗೆ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಉತ್ತರಗಳನ್ನು ರಮೇಶ್ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಚಾಟ್‌ಜಿಪಿಟಿ (ಚಾಟ್ ಜನರೇಟಿವ್ ಪ್ರಿ - ಟ್ರೇನಿಂಗ್ ಟ್ರಾನ್ಸ್‌ಫಾರ್ಮರ್) ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಬೆಳಕಿಗೆ ಬಂದಿರುವುದು ಇದೇ ಮೊದಲು ಎಂದು ಮೂಲಗಳು ತಿಳಿಸಿವೆ.
ಎಲೆಕ್ಟ್ರಾನಿಕ್ ಉಪಕರಣಗಳ ಸಹಾಯದಿಂದ ಪರೀಕ್ಷೆ ಬರೆದಿದ್ದ ಪ್ರಶಾಂತ್, ನರೇಶ್, ಮಹೇಶ್ ಮತ್ತು ಶ್ರೀನಿವಾಸ್ ಅವರನ್ನು ಎಸ್‌ಐಟಿ ಸೋಮವಾರ ಬಂಧಿಸಿದೆ. ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ.
ಪರೀಕ್ಷಾರ್ಥಿಗಳು ಪರೀಕ್ಷಾ ಕೊಠಡಿಯ ಪ್ರವೇಶ ದ್ವಾರದಲ್ಲಿ ಪತ್ತೆಯಾಗದೆ ಎಲೆಕ್ಟ್ರಾನಿಕ್ ಸಾಧನಗಳೊಂದಿಗೆ ಹೇಗೆ ಪ್ರವೇಶಿಸಿದರು ಎಂಬುದನ್ನು ಪತ್ತೆ ಹಚ್ಚಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಬ್ಲೂಟೂತ್ ಮೈಕ್ರೋ ಇಯರ್‌ಪೀಸ್‌ಗಳೊಂದಿಗೆ ಪರೀಕ್ಷಾ ಹಾಲ್‌ಗೆ ಪ್ರವೇಶಿಸಲು ಸಹಾಯ ಮಾಡಿದ ಪರೀಕ್ಷಕರನ್ನು ಅವರು ಹುಡುಕುತ್ತಿದ್ದರು. ಪರೀಕ್ಷೆ ಆರಂಭವಾದ 10 ನಿಮಿಷಗಳ ನಂತರ ಪರೀಕ್ಷಕರು ಪ್ರಶ್ನೆ ಪತ್ರಿಕೆಗಳ ಫೋಟೋ ತೆಗೆದು ರಮೇಶ್‌ಗೆ ವಾಟ್ಸ್ಆ್ಯಪ್ನಲ್ಲಿ ಕಳುಹಿಸಿರುವ ಶಂಕೆ ವ್ಯಕ್ತವಾಗಿದೆ.
ಸಹಾಯಕ ಎಂಜಿನಿಯರ್ (ಸಿವಿಲ್) ಪರೀಕ್ಷೆಯ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ರಮೇಶ್ ಮತ್ತೊಬ್ಬ ಆರೋಪಿ ವಿದ್ಯುತ್ ಇಲಾಖೆಯ ಕಿರಿಯ ಸಹಾಯಕ ಪೂಲಾ ರವಿ ಕಿಶೋರ್ ಅವರಿಂದ ಪಡೆದಿದ್ದರು. ಇನ್ನು ರಮೇಶ್ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಸುಮಾರು 25 ಅಭ್ಯರ್ಥಿಗಳಿಗೆ ತಲಾ 25 ರಿಂದ 30 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಮಾರ್ಚ್ 5 ರಂದು ಪರೀಕ್ಷೆ ನಡೆದಿತ್ತು.
ಈ ಹಿಂದೆ ಜನವರಿ 22 ಮತ್ತು ಫೆಬ್ರವರಿ 26 ರಂದು ನಡೆದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ವಿಭಾಗೀಯ ಲೆಕ್ಕಪತ್ರ ಅಧಿಕಾರಿ ಪರೀಕ್ಷೆಗಳಿಗೆ ರಮೇಶ್ ಅವರು ಆಕಾಂಕ್ಷಿಗಳಿಗೆ ಸಹಾಯ ಮಾಡಲು ಇತ್ತೀಚಿನ AI ತಂತ್ರಜ್ಞಾನ ಮತ್ತು ಮೈಕ್ರೋಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿದರು. ಪರೀಕ್ಷಾ ಕೇಂದ್ರದಿಂದ ಪರೀಕ್ಷಕರ ಮೂಲಕ ತನ್ನ ಮೊಬೈಲ್‌ನಲ್ಲಿ ಪ್ರಶ್ನೆ ಪತ್ರಿಕೆಯನ್ನು ಸ್ವೀಕರಿಸಿದ ನಂತರ, ಅವರು ಇತರ ನಾಲ್ವರ ಸಹಾಯದಿಂದ ಸರಿಯಾದ ಉತ್ತರಗಳನ್ನು ಪಡೆಯಲು ಚಾಟ್‌ಜಿಪಿಟಿ ಬಳಸಿದರು. ಬ್ಲೂಟೂತ್ ಇಯರ್‌ಬಡ್‌ಗಳನ್ನು ಬಳಸಿಕೊಂಡು ಪರೀಕ್ಷಾ ಹಾಲ್‌ನಲ್ಲಿದ್ದ ಅಭ್ಯರ್ಥಿಗಳಿಗೆ ಉತ್ತರ ಹೇಳುತ್ತಿದ್ದರು. ರಮೇಶ್ ಪ್ರತಿ ಅಭ್ಯರ್ಥಿಯೊಂದಿಗೆ 20ರಿಂದ 30 ಲಕ್ಷ ರೂ.ವರೆಗೆ ಡೀಲ್ ಮಾಡಿಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ:TSPSC ಪೇಪರ್ ಸೋರಿಕೆ ಪ್ರಕರಣ; ಮಹಿಳಾ ಕಾನ್ಸ್ಟೇಬಲ್ಗೆ ಕಪಾಳಮೋಕ್ಷ, ವೈಎಸ್ ಶರ್ಮಿಳಾ ವಶಕ್ಕೆ