ಹೈದರಾಬಾದ್ (ತೆಲಂಗಾಣ): ಪ್ರಮುಖ ಬೆಳವಣಿಗೆಯಲ್ಲಿ ಟಿಆರ್ಎಸ್ ಶಾಸಕರ ಖರೀದಿ ಯತ್ನ ಆರೋಪ ಪ್ರಕರಣದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ತೆಲಂಗಾಣ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಮನ್ಸ್ ಜಾರಿ ಮಾಡಿದೆ. ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 41 (ಎ) ಅಡಿಯಲ್ಲಿ ಸಮನ್ಸ್ ಜಾರಿ ಮಾಡಿದ್ದು, ನವೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಹೈದರಾಬಾದ್‌ನಲ್ಲಿರುವ ಪೊಲೀಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಲ್ಲಿ ನವೆಂಬರ್ 21ರಂದು 10.30ಕ್ಕೆ ಹಾಜರಾಗುವಂತೆ ಬಿ.ಎಲ್. ಸಂತೋಷ್ ಅವರಿಗೆ ಸೂಚಿಸಲಾಗಿದ್ದು, ಎಸ್‌ಐಟಿ ಮುಂದೆ ಹಾಜರಾಗದಿದ್ದರೆ ಬಂಧಿಸಲಾಗುವುದು ಎಂದೂ ಸಮನ್ಸ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಭರ್ಜರಿ ಆತಿಥ್ಯ.. ತಿಹಾರ್ ಜೈಲಿನಲ್ಲಿ ದೆಹಲಿ ಸಚಿವ ಸತ್ಯೇಂದ್ರ ಜೈನ್ಗೆ ಮಸಾಜ್- ಸಿಸಿಟಿವಿ ವಿಡಿಯೋ
ಕಳೆದ ತಿಂಗಳು ಟಿಆರ್‌ಎಸ್‌ನ ನಾಲ್ವರು ಶಾಸಕರಿಗೆ ಭಾರಿ ಹಣದ ಆಮಿಷವೊಡ್ಡಿ ಬಿಜೆಪಿಯ ತೆಕ್ಕೆಗೆ ಸೆಳೆಯಲು ಯತ್ನಿಸಲಾಗಿತ್ತು. ಈ ವೇಳೆ ಬಂಧಿಸಲಾಗಿರುವ ಬಿಜೆಪಿ ಏಜೆಂಟ್‌ಗಳು ಎನ್ನಲಾದ ಮೂವರ ನಡುವಿನ ಸಂಭಾಷಣೆಯಲ್ಲಿ ಬಿ ಎಲ್ ಸಂತೋಷ್ ಹೆಸರು ಕೇಳಿಬಂದಿತ್ತು.
ಇದನ್ನೂ ಓದಿ:ತೆಲಂಗಾಣದೊಂದಿಗೆ ದೆಹಲಿ, ಆಂಧ್ರ ಸರ್ಕಾರಗಳನ್ನೂ ಉರುಳಿಸಲು ಪಿತೂರಿ: ಬಿಜೆಪಿ ವಿರುದ್ಧ ಕೆಸಿಆರ್ ಆರೋಪ
ಈ ಹಿನ್ನೆಲೆಯಲ್ಲಿ ಸಂತೋಷ್, ಕೇರಳದ ವೈದ್ಯ ಜಗ್ಗು ಸ್ವಾಮಿ, ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಲ್ಲಪಲ್ಲಿ ಮತ್ತು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ವಕೀಲ ಮತ್ತು ಸಂಬಂಧಿಗೆ ವಿಚಾರಣೆಗಾಗಿ ಸಮನ್ಸ್ ನೀಡಲಾಗಿದೆ. ಈ ನಾಲ್ವರಿಗೂ ಒಂದೇ ದಿನ ಸಮನ್ಸ್ ಜಾರಿ ಮಾಡಲಾಗಿದೆ. ಬಂಧಿತ ಮೂವರು ಆರೋಪಿಗಳ ಜೊತೆಗಿನ ಸಂಬಂಧದ ಕುರಿತು ವಿಚಾರಣೆಗಾಗಿ ಎಸ್‌ಐಟಿ ಎದುರು ಹಾಜರಾಗುವಂತೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕೆಸಿಆರ್ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಕರ್ನಾಟಕ ರಾಜಕೀಯವೂ ಪ್ರಸ್ತಾಪ