ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಕಮರಿಗೆ ಬಿದ್ದ ಟೂರಿಸ್ಟ್​​ ಬಸ್​​: ಓರ್ವ ವಿದ್ಯಾರ್ಥಿ ಸಾವು, 40 ಜನರಿಗೆ ಗಾಯ - accident

ಕೇರಳದಲ್ಲಿ ಟೂರಿಸ್ಟ್‌ ಬಸ್‌ವೊಂದು ಕಮರಿಗೆ ಬಿದ್ದು ಸಾವು-ನೋವು ಸಂಭವಿಸಿದೆ. ಇದಲ್ಲದೇ ಕೋಯಿಕ್ಕೋಡ್‌, ಕೊಟ್ಟಾಯಂನಲ್ಲಿ ಸರಣಿ ಅವಘಡಗಳು ನಡೆದಿದ್ದು ವರದಿಯಾಗಿವೆ.

tourist bus falls in gorge
ಕೇರಳದಲ್ಲಿ ಕಮರಿಗೆ ಬಿದ್ದ ಬಸ್

By

Published : Jan 1, 2023, 12:51 PM IST

Updated : Jan 1, 2023, 2:31 PM IST

ತಿರುವನಂತಪುರಂ: ಅಧ್ಯಯನ ಪ್ರವಾಸ ಮುಗಿಸಿ ವಾಪಸ್​ ಬರುತ್ತಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿದ್ದ ಬಸ್ ಇಡುಕ್ಕಿ ಜಿಲ್ಲೆಯ ಆದಿಮಾಲಿಯಲ್ಲಿ ಕಮರಿಗೆ ಬಿದ್ದಿದೆ. ಘಟನೆಯಲ್ಲಿ ಮಲಪ್ಪುರಂನ ತಿರೂರ್ ಕೈಗಾರಿಕಾ ತರಬೇತಿ ಸಂಸ್ಥೆಯ ಮಿಲ್ಹಾಜ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಬಸ್​ನಡಿ ಮೃತದೇಹ ಪತ್ತೆ: ಈ ಅಪಘಾತ ಇಂದು ಮುಂಜಾನೆ 1.15 ರ ಸುಮಾರಿಗೆ ಸಂಭವಿಸಿದೆ. ಕನಿಷ್ಠ 40 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಆದಿಮಲಿ ಮತ್ತು ಸುತ್ತಮುತ್ತಲಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೊದಲು ಮಿಲ್ಹಾಜ್ ನಾಪತ್ತೆಯಾಗಿದ್ದಾನೆ ಎಂದು ಆತನ ಸಹಪಾಠಿಗಳು ತಿಳಿಸಿದ್ದರು. ಬಳಿಕ ಸ್ಥಳೀಯರು ಹುಡುಕಾಟ ನಡೆಸಿದಾಗ ಆತನ ಮೃತದೇಹ ಬಸ್‌ನಡಿ ಪತ್ತೆಯಾಗಿದೆ.

ತಿಂಕಲಕಾಡ್ ಬಳಿ ತೀವ್ರ ತಿರುವು ಮತ್ತು ಕಡಿದಾದ ಇಳಿಜಾರು ಇದೆ. ಹಾಗಾಗಿ ಬಸ್ ನಿಯಂತ್ರಣ ತಪ್ಪಿ ಕಮರಿಗೆ ಪಲ್ಟಿಯಾಗಿದೆ. ಭಾರಿ ಶಬ್ದ ಕೇಳಿದ್ದರಿಂದ ಸ್ಥಳೀಯರು ಸ್ಥಳಕ್ಕೆ ಬಂದಿದ್ದರು. ಬಳಿಕ ಸ್ಥಳೀಯರ ನೇತೃತ್ವದಲ್ಲಿ ಮೊದಲ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.

2 ಗಂಟೆ ರಕ್ಷಣಾ ಕಾರ್ಯಾಚರಣೆ: ಅಗ್ನಿಶಾಮಕ ದಳ ಹಾಗೂ ವಿವಿಧ ಠಾಣೆಗಳ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಎರಡು ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯ ನಂತರ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಓರ್ವ ಗಾಯಾಳುವಿನ ಸ್ಥಿತಿ ಗಂಭೀರವಾಗಿದ್ದು, ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.

ಅವೈಜ್ಞಾನಿಕ ರಸ್ತೆ ನಿರ್ಮಾಣ ಆರೋಪ:ಕಿರಿದಾದ ರಸ್ತೆಯಲ್ಲಿ ವಾಹನ ಚಲಾಯಿಸಲು ಚಾಲಕನಿಗೆ ಅನುಭವದ ಕೊರತೆ ಇರುವುದೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದೇ ವೇಳೆ ರಕ್ಷಣಾ ಕಾರ್ಯಕ್ಕೆ ಬಂದ ಸ್ಥಳೀಯರು ಈ ಭಾಗದಲ್ಲಿ ನಿತ್ಯ ಅಪಘಾತಗಳು ನಡೆಯುತ್ತಿವೆ. ಅವೈಜ್ಞಾನಿಕ ರಸ್ತೆ ನಿರ್ಮಾಣವೇ ಅಪಘಾತಗಳಿಗೆ ಕಾರಣವಾಗುತ್ತಿವೆ. ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಇದನ್ನೂ ಓದಿ:ಹೊಸ ವರ್ಷದ ಸಂಭ್ರಮದಲ್ಲಿ ಶೋಕ: ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ದುರ್ಮರಣ

ಪ್ರಕರಣ -2: ಇಬ್ಬರು ಯುವಕರು ಸಾವು: ಮತ್ತೊಂದು ಘಟನೆಯಲ್ಲಿ ಇಬ್ಬರು ಯುವಕರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಪೊಲೀಸ್ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಕೊಟ್ಟಾಯಂ ಮೂಲದ ಜಸ್ಟಿನ್ ಮತ್ತು ಆತನ ಸ್ನೇಹಿತ ಅಲೆಕ್ಸ್ ಎಂದು ಗುರುತಿಸಲಾಗಿದೆ. ಅಲಪ್ಪುಳ ಜಿಲ್ಲೆಯ ತಲವಾಡಿಯಲ್ಲಿ ಬೆಳಗಿನ ಜಾವ 3.30ಕ್ಕೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ವೇಳೆ ಜೀಪಿನಲ್ಲಿ ಚಾಲಕ ಒಬ್ಬರೇ ಇದ್ದರು.

ಪ್ರಕರಣ-3: ಮಹಿಳೆಗೆ ಬಸ್​ ಡಿಕ್ಕಿ: ಇನ್ನೊಂದು ಘಟನೆಯಲ್ಲಿ, ಕೋಯಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿಯಲ್ಲಿ ಮಹಿಳಾ ಪಾದಚಾರಿಯೊಬ್ಬರಿಗೆ ಖಾಸಗಿ ಬಸ್​ ಡಿಕ್ಕಿ ಹೊಡೆದಿದೆ. ಮಹಿಳೆಯ ಗುರುತು ಪತ್ತೆಯಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ-4: ಬೈಕ್​​ಗೆ ತೈಲ ಟ್ಯಾಂಕರ್​ ಡಿಕ್ಕಿ: ಕೊಟ್ಟಾಯಂ ಜಿಲ್ಲೆಯ ಚಿಂಗವನಂನಲ್ಲಿ ದ್ವಿಚಕ್ರ ವಾಹನಕ್ಕೆ ತೈಲ ಟ್ಯಾಂಕರ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಮತ್ತೊಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪ್ರಾಣ ಕಳೆದುಕೊಂಡ ಯುವಕರನ್ನು ಶ್ಯಾಮ್ ಮತ್ತು ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ.

Last Updated : Jan 1, 2023, 2:31 PM IST

ABOUT THE AUTHOR

...view details