ತಿರುವನಂತಪುರಂ (ಕೇರಳ): ನೆರೆ ರಾಜ್ಯ ಕೇರಳದಲ್ಲಿ ಮನುಷ್ಯ ಮತ್ತು ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ಇಂದು ಬೆಳಗ್ಗೆ ಪ್ರತ್ಯೇಕ ಸ್ಥಳಗಳಲ್ಲಿ ನಡೆದ ಕಾಡೆಮ್ಮೆ ದಾಳಿ ಪ್ರಕರಣದಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಕೊಟ್ಟಾಯಂ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟರೆ, ಕೊಲ್ಲಂನಲ್ಲಿ ಒಬ್ಬರು ಬಲಿಯಾಗಿದ್ದಾರೆ.
ಕೊಟ್ಟಾಯಂನ ಎರುಮೇಲಿ ಪಂಚಾಯತ್‌ನ ಕಣಮಲ ಪ್ರದೇಶದಲ್ಲಿ ಪುರತೇಲ್ ಚಾಕೋ (65) ಮತ್ತು ಪುನಂತರ ಥಾಮಸ್ (60) ಎಂಬವರ ಮೇಲೆ ಕಾಡೆಮ್ಮೆ ದಾಳಿ ಮಾಡಿ ಸಾಯಿಸಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಚಾಕೋ ತಮ್ಮ ಮನೆಯಲ್ಲಿ ಪೇಪರ್ ಓದುತ್ತಾ ಕುಳಿತ್ತಿದ್ದರು. ಈ ವೇಳೆ ಕಾಡೆಮ್ಮೆ ಏಕಾಏಕಿ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡು ಚಾಕೋ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮತ್ತೊಂದೆಡೆ, ಪಕ್ಕದ ಮನೆ ನಿವಾಸಿ ಥಾಮಸ್ ಮೇಲೂ ಇದೇ ಕಾಡೆಮ್ಮೆ ದಾಳಿ ಮಾಡಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳೀಯರು ರವಾನಿಸಿದ್ದಾರೆ. ಜೀವನ್ಮರಣ ಹೋರಾಟ ನಡೆಸಿದ ಥಾಮಸ್ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ. ಕೊಲ್ಲಂ ಜಿಲ್ಲೆಯ ಎಡಮುಳಯ್ಕಲ್ ಪ್ರದೇಶದಲ್ಲೂ ಕಾಡೆಮ್ಮೆಯೊಂದು ದಾಳಿ ನಡೆಸಿದ್ದು, ವರ್ಗೀಸ್ ಎಂಬವರು ಸಾವಿಗೀಡಾಗಿದ್ದಾರೆ.
ಸ್ಥಳೀಯರ ಪ್ರತಿಭಟನೆ:ಕೊಟ್ಟಾಯಂ ಜಿಲ್ಲೆಯಲ್ಲಿ ಒಂದೇ ದಿನ ಕಾಡೆಮ್ಮೆ ದಾಳಿಗೆ ಇಬ್ಬರು ಬಲಿಯಾದ ಬೆನ್ನಲ್ಲೇ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ. ಅಲ್ಲದೇ, ಸ್ಥಳೀಯರೆಲ್ಲ ಸೇರಿಕೊಂಡು ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆಸಿ ಆಕ್ರೋಶ ಹೊರ ಹಾಕಿದರು. ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿದ್ದರೂ ಅರಣ್ಯ ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾನಿರತರು ದೂರಿದರು.