ನಿಜಾಮಾಬಾದ್(ತೆಲಂಗಾಣ): ನೆರೆಯ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಅಮಾನವೀಯ ಘಟನೆಯೊಂದು ನಡೆದಿದೆ. ತಂದೆ - ತಾಯಿ ಇಲ್ಲದ ತಬ್ಬಲಿ ಯುವತಿ ಮೇಲೆ ಆಕೆಯ ದೊಡ್ಡಪ್ಪ ಮತ್ತು ಓರ್ವ ಪೊಲೀಸ್ ಕಾನ್ಸ್ಟೇಬಲ್ ಬಲತ್ಕಾರ ಎಸಗಿದ್ದು, ಸದ್ಯ ಆ ಯುವತಿ ಎಂಟು ತಿಂಗಳು ಗರ್ಭಿಣಿಯಾಗಿದ್ದಾಳೆ. ಅದರಲ್ಲೂ ಸಂತ್ರಸ್ತೆ ಮಾನಸಿಕ ಅಸ್ವಸ್ಥಗಳಾಗಿದ್ದು, ತನೊಂದಿಗೆ ಏನು ನಡೆದಿದೆ ಎಂಬ ಪ್ರಜ್ಞೆಯೂ ಆಕೆಗೆ ಇಲ್ಲ!.
ಎಂಟು ವರ್ಷಗಳ ಹಿಂದೆ ತಾಯಿ ಮತ್ತು ತಂದೆ ಇಬ್ಬರನ್ನೂ ಕಳೆದುಕೊಂಡಿದ್ದ ಇಬ್ಬರು ಬಾಲಕಿಯರು ತಮ್ಮ ದೊಡ್ಡಪ್ಪ ಮತ್ತು ದೊಡ್ಡಮ್ಮನ ಪಾಲನೆಯಲ್ಲಿ ಇದ್ದರು. ಆದರೆ, ದೊಡ್ಡಮ್ಮ ಹಣಕ್ಕಾಗಿ ಹಿರಿಯ ಬಾಲಕಿಯನ್ನು ಕಾನ್ಸ್ಟೇಬಲ್ ಆದ ಚಂದ್ರಕಾಂತ್ ಎಂಬಾತನ ಬಳಿ ಬಿಟ್ಟಿದ್ದಳು. ಪ್ರಸ್ತುತ 22 ವರ್ಷದ ಆ ಯುವತಿ ಮಾನಸಿಕ ಅಸ್ವಸ್ಥಗಳಾಗಿದ್ದು, ಆಕೆ ಮೇಲೆ ಕಾನ್ಸ್ಟೇಬಲ್ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ.
ಅಲ್ಲದೇ, ಈ ಕೃತ್ಯ ಬೆಳಕಿಗೆ ಬಾರದಂತೆ ನೋಡಿಕೊಳ್ಳಲು ದೊಡ್ಡಪ್ಪ ಮತ್ತು ದೊಡ್ಡಮ್ಮ ಇಬ್ಬರೂ ಸೇರಿಕೊಂಡು ಬಾಲಕಿಯನ್ನು ಮನೆಯಲ್ಲಿ ಕೂಡಿ ಹಾಕಿದ್ದರು. ಆದರೆ, ಸಂತ್ರಸ್ತೆಯ ತಂಗಿ ತನ್ನ ಅಕ್ಕನ ಪರಿಸ್ಥಿತಿಯ ಬಗ್ಗೆ ಅಕ್ಕ - ಪಕ್ಕದವರಿಗೆ ಮಾಹಿತಿ ನೀಡಿದ್ದಾಳೆ. ಇದರಿಂದ ಇದೀಗ ಈ ದುಷ್ಕೃತ್ಯ ಬಯಲಿಗೆ ಬಂದಿದೆ.