ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ.ರೂಪ ಅವರು ಯಾವುದೇ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ನಿರ್ಬಂಧಕಾಜ್ಞೆ ವಿಸ್ತರಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ತಮ್ಮ ವಾದವನ್ನು ಆಲಿಸದೇ ನೀಡಿರುವ ಆದೇಶವನ್ನು ಪ್ರಶ್ನಿಸಿ ಐಪಿಎಸ್ ಅಧಿಕಾರಿ ಡಿ.ರೂಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಅವರಿದ್ದ ನ್ಯಾಯಪೀಠ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ ಆದೇಶಿಸಿದೆ. ಈ ಆದೇಶದಿಂದ ವಿಚಾರಣಾ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆ ತೆರವಾದಂತಾಗಿದೆ.
ವಿಚಾರಣೆ ವೇಳೆ ಡಿ.ರೂಪಾ ಪರವಾಗಿ ವಾದ ಮಂಡಿಸಿದ ವಕೀಲ ಮಧುಕರ್ ದೇಶಪಾಂಡೆ, ವಿಚಾರಣಾ ನ್ಯಾಯಾಲಯ ತಡೆಯಾಜ್ಞೆ ನೀಡಿದ ಬಳಿಕ ಪ್ರತಿವಾದಿಯಾಗಿರುವ ನಮ್ಮ ಕಕ್ಷಿದಾರರಿಗೆ ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿರುವ ಎಲ್ಲ ದಾಖಲೆಗಳ ಪ್ರತಿಯೊಂದಿಗೆ ತಲುಪಿಸಬೇಕಾಗಿತ್ತು. ಆದರೆ, ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿರುವುದಾಗಿ ಹೇಳಿ ನಿರ್ಬಂಧಕಾಜ್ಞೆ ವಿಸ್ತರಣೆ ಮಾಡುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ನ್ಯಾಯಾಲಯ ನಿರ್ಬಂಧಕಾಜ್ಞೆ ವಿಸ್ತರಣೆ ಮಾಡಿದೆ.
ಆದರೆ, ಪ್ರತಿವಾದಿಗಳಿಗೆ ನೋಟಿಸ್ ತಲುಪದಿದ್ದರೂ, ನಿರ್ಬಂಧಕಾಜ್ಞೆ ವಿಸ್ತರಣೆ ಮಾಡಿದಲ್ಲಿ ಅದು ತಾನಾಗಿಯೇ ರದ್ದಾಗಲಿದೆ. ಜತೆಗೆ ಮಧ್ಯಂತರ ತಡೆಯಾಜ್ಞೆ ವಿಸ್ತರಣೆ ಮಾಡುವುದಕ್ಕೆ ಅವಕಾಶವಿಲ್ಲ. ಹೀಗಾಗಿ ನಿರ್ಬಂಧಕಾಜ್ಞೆ ವಿಸ್ತರಣೆ ಮಾಡಿರುವ ಆದೇಶ ರದ್ದು ಮಾಡಬೇಕು ಎಂದು ಮನವಿ ಮಾಡಿದ್ದರು. ಇದನ್ನು ಆಲಿಸಿದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ ನೀಡಿದ್ದ ಮಧ್ಯಂತರ ನಿರ್ಬಂಧಕಾಜ್ಞೆ ಆದೇಶವನ್ನು ರದ್ದು ಪಡಿಸಿ ಆದೇಶಿಸಿದೆ.