ಪಣಜಿ (ಗೋವಾ) : ಗಡಿಯಾಚೆಯಿಂದ ಭಯೋತ್ಪಾದನೆ ನಡೆಸುತ್ತಿರುವ ಪಾಕಿಸ್ತಾನದ ವಿರುದ್ಧ ವಿದೇಶಾಂಗ ಸಚಿವ ಎಸ್.ಜೈಶಂಕರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗೋವಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಒಕ್ಕೂಟ (ಎಸ್‌ಸಿಓ) ದೇಶಗಳ ವಿದೇಶಾಂಗ ಮಂತ್ರಿಗಳ ಸಮ್ಮೇಳನದ ಕೊನೆಯ ದಿನದಂದು ಸಭೆಯಲ್ಲಿ ಮಾತನಾಡಿದ ಸಚಿವ ಎಸ್. ಜೈಶಂಕರ್, ಭಯೋತ್ಪಾದನೆಯ ಸಮಸ್ಯೆ ಈಗಲೂ ಮುಂದುವರೆದಿದೆ ಎಂದರು.
“ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇರುವುದಿಲ್ಲ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಅದನ್ನು ನಿಲ್ಲಿಸಬೇಕು ಎಂದು ನಾವು ದೃಢವಾಗಿ ನಂಬುತ್ತೇವೆ. ಭಯೋತ್ಪಾದನೆಯನ್ನು ಎದುರಿಸುವುದು ಎಸ್‌ಸಿಓ ದ ಮೂಲ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಜೈಶಂಕರ್ ಹೇಳಿದರು. ಪಾಕಿಸ್ತಾನದ ವಿದೇಶಾಂಗ ಸಚಿವರು ಈ ಸಮಯದಲ್ಲಿ ಹಾಜರಿದ್ದುದು ಗಮನಾರ್ಹ. "ಎಸ್‌ಸಿಓ ಅಧ್ಯಕ್ಷನಾಗಿ ಭಾರತವು 14 ಕ್ಕೂ ಹೆಚ್ಚು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನಿಸುವ ಮೂಲಕ ಎಸ್‌ಸಿಓ ವೀಕ್ಷಕರು ಮತ್ತು ಸಂವಾದ ಪಾಲುದಾರರೊಂದಿಗೆ ಅಭೂತಪೂರ್ವ ಸಂಬಂಧವನ್ನು ಪ್ರಾರಂಭಿಸಿದೆ" ಎಂದು ಜೈ ಶಂಕರ್ ಹೇಳಿದರು.
ಎಸ್‌ಸಿಓ ಸುಧಾರಣೆ ಮತ್ತು ಆಧುನೀಕರಣದ ವಿಷಯಗಳ ಕುರಿತು ಈಗಾಗಲೇ ಚರ್ಚೆ ಪ್ರಾರಂಭವಾಗಿರುವುದು ಸಂತೋಷದ ವಿಷಯ. ಇಂಗ್ಲಿಷ್ ಮಾತನಾಡುವ ಸದಸ್ಯ ರಾಷ್ಟ್ರಗಳೊಂದಿಗೆ ಆಳವಾದ ಸಂಪರ್ಕ ಏರ್ಪಡಿಸಲು ಇಂಗ್ಲಿಷ್ ಅನ್ನು ಎಸ್‌ಸಿಓ ದ 3 ನೇ ಅಧಿಕೃತ ಭಾಷೆಯಾಗಿ ಮಾಡುವ ಭಾರತದ ದೀರ್ಘಕಾಲದ ಬೇಡಿಕೆಗೆ ನಾನು ಸದಸ್ಯ ರಾಷ್ಟ್ರಗಳ ಬೆಂಬಲವನ್ನು ಕೋರುತ್ತೇನೆ ಎಂದು ಅವರು ಹೇಳಿದರು.