ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ: 10 ಮಂದಿ ಪೊಲೀಸರು ಹುತಾತ್ಮ ದಾಂತೇವಾಡ (ಛತ್ತೀಸ್‌ಗಢ):ಛತ್ತೀಸ್‌ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ದಾಂತೇವಾಡ ಜಿಲ್ಲೆಯಲ್ಲಿ ಬುಧವಾರ ನಡೆಸಿದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಹತ್ತು ಜನ ಪೊಲೀಸರು ಮತ್ತು ಓರ್ವ ನಾಗರಿಕ ಸಾವನ್ನಪ್ಪಿದ್ದಾರೆ. ಇಲ್ಲಿನ ಅರನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಮಿನಿ ಗೂಡ್ಸ್ ವಾಹನವನ್ನು ಐಇಡಿ ಬಳಸಿ ನಕ್ಸಲರು ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಕ್ಸಲ್ ಚಟುವಟಿಕೆ ವಿರುದ್ಧದ ಕಾರ್ಯಾಚರಣೆ ಮುಗಿಸಿ ರಾಜ್ಯ ಪೊಲೀಸ್‌ನ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ತಂಡ ವಾಹನದಲ್ಲಿ ಹಿಂತಿರುಗುತ್ತಿದ್ದಾಗ ಈ ದಾಳಿ ನಡೆಸಲಾಗಿದೆ. ಮೃತರಲ್ಲಿ ಓರ್ವ ಚಾಲಕ ಸಹ ಸೇರಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್ ಸಹ ಪ್ರತಿಕ್ರಿಯಿಸಿದ್ದು, "ನಕ್ಸಲರು ನಡೆಸಿದ ದಾಳಿ ಬಗ್ಗೆ ಮಾಹಿತಿ ಸಿಕ್ಕಿದೆ. ಇದು ತುಂಬಾ ದುಃಖಕರ ಘಟನೆವಾಗಿದೆ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ನಕ್ಸಲರ ವಿರುದ್ಧದ ಈ ಹೋರಾಟ ಕೊನೆಯ ಹಂತದಲ್ಲಿದೆ. ದಾಳಿಕೋರ ನಕ್ಸಲರನ್ನು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ'' ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ನಕ್ಸಲರ ದಾಳಿ ಕುರಿತಂತೆ ಸಿಎಂ ಭೂಪೇಶ್ ಬಾಘೇಲ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ಸಿಗದಬೇಕಾದ ಎಲ್ಲ ರೀತಿಯ ನೆರವು ಒದಗಿಸಲಾಗುವುದು ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಧಾನಿ ಮೋದಿ ಸಂತಾಪ:ನಕ್ಸಲರ ದಾಳಿ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ''ದಾಂತೇವಾಡದಲ್ಲಿ ಛತ್ತೀಸ್‌ಗಢ ಪೊಲೀಸರ ಮೇಲೆ ನಡೆದ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಈ ದಾಳಿಯಲ್ಲಿ ನಾವು ಕಳೆದುಕೊಂಡ ವೀರ ಯೋಧರಿಗೆ ನನ್ನ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರ ತ್ಯಾಗ ಸದಾ ಸ್ಮರಣೀಯ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು'' ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಟ್ವೀಟ್:ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಟ್ವೀಟ್ ಮಾಡಿದ್ದು, ''ಛತ್ತೀಸ್‌ಗಢದ ದಾಂತೇವಾಡದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ನಮ್ಮ 10 ಡಿಆರ್‌ಜಿ ಜವಾನರು ಮತ್ತು ಚಾಲಕ ಹುತಾತ್ಮರಾಗಿರುವುದು ತೀವ್ರ ದುಃಖ ತಂದಿದೆ. ವೀರರಿಗೆ ನಮನಗಳು. ನಾವು ದುಃಖತಪ್ತ ಕುಟುಂಬಗಳೊಂದಿಗೆ ಇದ್ದೇವೆ. ಛತ್ತೀಸ್‌ಗಢದಲ್ಲಿ ನಕ್ಸಲ್ ವಿರುದ್ಧದ ಹೋರಾಟ ಅಂತಿಮ ಹಂತದಲ್ಲಿದ್ದು, ಅದರಲ್ಲಿ ನಮ್ಮ ಸರ್ಕಾರ ಯಶ ಕಾಣಲಿದೆ'' ಎಂದು ತಿಳಿಸಿದ್ದಾರೆ.
ಹುತಾತ್ಮ ಪೊಲೀಸರು ಮಾಹಿತಿ: ಐಇಡಿ ಸ್ಫೋಟದಲ್ಲಿ ಹುತಾತ್ಮರಾದ ಪೊಲೀಸರ ಮಾಹಿತಿಯನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಹೆಡ್ ಕಾನ್ಸ್ಟೇಬಲ್ಗಳಾದ ಜೋಗ ಸೋಧಿ, ಮುನ್ನಾ ರಾಮ್ ಕಡ್ತಿ, ಸಂತೋಷ್ ತಮೋ, ಕಾನ್ಸ್ಟೇಬಲ್ಗಳಾದ ದುಲ್ಗೊ ಮಾಂಡವಿ, ಲಖ್ಮು ಮಾರ್ಕಮ್, ಜೋಗ ಕವಾಸಿ, ಹರಿರಾಮ್ ಮಾಂಡವಿ, ರಹಸ್ಯ ಸೈನಿಕರಾದ ರಾಜು ರಾಮ್, ಜೈರಾಮ್ ಪೊಡಿಯಂ, ಜಗದೀಶ್ ಕವಾಸಿ ಮತ್ತು ಚಾಲಕ ಧನಿರಾಮ್ ಯಾದವ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಪೊಲೀಸ್ ಮಾಹಿತಿದಾರರೆಂಬ ಶಂಕೆ: ಮೂವರು ವ್ಯಾಪಾರಿಗಳಿಗೆ ನಕ್ಸಲರಿಂದ ಥಳಿತ, ಓರ್ವ ಸಾವು