ನವದೆಹಲಿ: ದೂರಸಂಪರ್ಕ ಮಸೂದೆ-2023 ನ್ನು ಇಂದು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಆನ್ಲೈನ್ ಮೆಸೇಜಿಂಗ್ ಮತ್ತು ಸ್ಟ್ರೀಮಿಂಗ್ ಸೇವೆಗಳಂತಹ ಓವರ್-ದಿ-ಟಾಪ್ ಸೇವೆಗಳನ್ನು ಈ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಡಿಸೆಂಬರ್ 18 ರಂದು ಲೋಕಸಭೆಯಲ್ಲಿ ಮಂಡಿಸಲಾದ ದೂರಸಂಪರ್ಕ ಮಸೂದೆ 2023 ರ ಹೊಸ ಆವೃತ್ತಿಯಲ್ಲಿ ಸಿಮ್ ಕಾರ್ಡ್ ನೀಡುವಾಗ ಟೆಲಿಕಾಂ ಕಂಪನಿಗಳು ಗ್ರಾಹಕರ ಬಯೋಮೆಟ್ರಿಕ್ ಪರಿಶೀಲನೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
"ಟೆಲಿಕಾಂ ಸೇವೆಗಳನ್ನು ನೀಡುವ ಯಾವುದೇ ಅಧಿಕೃತ ಕಂಪನಿಯು ಯಾವುದೇ ವ್ಯಕ್ತಿಗೆ ಟೆಲಿಕಾಂ ಸೇವೆಗಳನ್ನು ನೀಡುವ ಮುನ್ನ ಆತನ ಬಯೋಮೆಟ್ರಿಕ್ ಗುರುತನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯ" ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ಡಿಸೆಂಬರ್ 18 ರಂದು ಸಂಸತ್ತಿನಲ್ಲಿ ಮಂಡಿಸಿದ ಮಸೂದೆಯ ಆವೃತ್ತಿಯಲ್ಲಿ ಇ - ಕಾಮರ್ಸ್, ಆನ್ಲೈನ್ ಮೆಸೇಜಿಂಗ್, ಪೇಮೆಂಟ್ಸ್ ಮುಂತಾದ ಓವರ್-ದಿ-ಟಾಪ್ (ಒಟಿಟಿ) ಸೇವೆಗಳನ್ನು ದೂರಸಂಪರ್ಕ ಸೇವೆಗಳ ವ್ಯಾಖ್ಯಾನದಿಂದ ಹೊರಗಿಡಲಾಗಿದೆ. ಕಳೆದ ವರ್ಷ ಮಸೂದೆಯ ಹಿಂದಿನ ಕರಡು ಆವೃತ್ತಿಯಲ್ಲಿ ಒಟಿಟಿ ಸೇವೆಗಳನ್ನು ಅದರ ವ್ಯಾಪ್ತಿಗೆ ಸೇರಿಸಲಾಗಿತ್ತು. ಆದರೆ, ಇಂಟರ್ನೆಟ್ ಕಂಪನಿಗಳಿಂದ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಸರ್ಕಾರ ಹೊಸ ಮಸೂದೆಯಲ್ಲಿ ಒಟಿಟಿಗಳನ್ನು ಇದರ ವ್ಯಾಪ್ತಿಯಿಂದ ಹೊರಗಿಟ್ಟಿದೆ.