ತೆಲಂಗಾಣ : ರಾಜ್ಯದಲ್ಲಿ ಮೂರನೇ ದಿನವೂ ಭಾರಿ ಮಳೆ ಮುಂದುವರಿದಿದೆ. ಪರಿಣಾಮ, ರಾಜ್ಯ ಸರ್ಕಾರವು ಇಂದು ಮತ್ತು ನಾಳೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲು ನಿರ್ಧರಿಸಿದೆ. ಭದ್ರಾಚಲಂನಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ತಗ್ಗು ಪ್ರದೇಶಗಳ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಹಾಗೆಯೇ, ಗೋದಾವರಿ ಹರಿವು ಸಹ ಅಧಿಕವಾಗಿದ್ದು, ಪ್ರವಾಹ ಸ್ಥಿತಿ ಎದುರಾಗಿದೆ.
ವರುಣನ ಆರ್ಭಟಕ್ಕೆ ಸಿದ್ದಿಪೇಟೆ ಜಿಲ್ಲೆಯ ಕೋಹೆಡ ಮಂಡಲದ ಬಸ್ವಾಪುರದಲ್ಲಿ ಸಿದ್ದಿಪೇಟೆ-ಹನುಮಕೊಂಡ ಮುಖ್ಯರಸ್ತೆ ಜಲಾವೃತಗೊಂಡಿದೆ. ಮೋಯ ತುಮ್ಮೆದ ಹೊಳೆ ತುಂಬಿ ಹರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸಂಚಾರ ಸ್ಥಗಿತಗೊಳಿಸಿದ್ದಾರೆ.
ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ತಾಳಿಪೇರು ಜಲಾಶಯದಿಂದ 21 ಗೇಟ್‌ಗಳಲ್ಲಿ 60,000 ಕ್ಯೂಸೆಕ್ ನೀರನ್ನು ಗೋದಾವರಿಗೆ ಬಿಡಲಾಗುತ್ತಿದೆ. ಮೇಲಿಂದ ಮೇಲೆ ಬರುತ್ತಿರುವ ಪ್ರವಾಹದಿಂದಾಗಿ ಭದ್ರಾಚಲಂನಲ್ಲಿ ಗೋದಾವರಿ ನೀರಿನ ಮಟ್ಟ ಕ್ರಮೇಣ ಹೆಚ್ಚುತ್ತಿದ್ದು, ಬೆಳಗ್ಗೆ 9 ಗಂಟೆಗೆ ನೀರಿನ ಮಟ್ಟ 40 ಅಡಿ ತಲುಪಿದೆ. ಕಾಳೇಶ್ವರಂ, ಇಂದ್ರಾವತಿ, ಪ್ರಾಣಹಿತ, ತಾಳಿಪೇರು ಕಡೆಯಿಂದ ನೀರು ಹರಿದು ಬರುವುದರಿಂದ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಜೊತೆಗೆ, ತಗ್ಗು ಪ್ರದೇಶದ ಜನರು ಜಾಗೃತರಾಗುವಂತೆ ಭದ್ರಾದ್ರಿ ಜಿಲ್ಲಾಧಿಕಾರಿ ಪ್ರಿಯಾಂಕಾ ತಿಳಿಸಿದ್ದು, ಪ್ರವಾಹ ಪೀಡಿತ ಗ್ರಾಮಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವಾರಂಗಲ್ ಜಿಲ್ಲೆಯ ವರ್ಧನ್ನಪೇಟ್ ಮಂಡಲದ ರಾಮೋಜಿ ಕುಮ್ಮರಿಗುಡೆಂನಲ್ಲಿ ಮಳೆಗೆ ಮನೆಯೊಂದು ಕುಸಿದಿದೆ. ಮನೆಯಲ್ಲಿದ್ದವರೆಲ್ಲರೂ ಕೃಷಿ ಕೆಲಸಕ್ಕೆ ತೆರಳಿದ್ದಾಗ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ. ಹೆಚ್ಚು ಮಳೆಯಿಂದಾಗಿ ರಾಮಗುಂಡಂ ಮೇಲ್ಮೈ ಗಣಿಗಳಲ್ಲಿ ಕಲ್ಲಿದ್ದಲು ಉತ್ಪಾದನೆ ಸ್ಥಗಿತಗೊಂಡಿದೆ. ಮಣ್ಣು ಶೇಖರಣೆಯಾಗಿ ಯಂತ್ರೋಪಕರಣಗಳು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, 70,000 ಟನ್ ಕಲ್ಲಿದ್ದಲು ಉತ್ಪಾದನೆ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.