ಹೈದರಾಬಾದ್:ಸಾಲಬಾಧೆ ತಾಳಲಾರದೆ ದಂಪತಿ ಇಬ್ಬರು ಪುತ್ರಿಯರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾದರ್ ಗುಲ್ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಕೂರ್ಮಲಗುಡ ಹೊಂಡದಲ್ಲಿ ನಾಲ್ವರ ಶವ ಪತ್ತೆಯಾಗಿದ್ದು, ಮೃತರನ್ನು ಖುದ್ದೂಸ್ ಪಾಷಾ (37), ಫಾತಿಮಾ (28), ಮೆಹರ್ (9) ಮತ್ತು ಫಿರ್ದೋಶ್ ಬೇಗಂ (6) ಎಂದು ಗುರುತಿಸಲಾಗಿದೆ. ಖುದ್ದೂಸ್ ಪಾಷಾ ಕುಟುಂಬ ಹೈದರಾಬಾದ್‌ನ ಸಂತೋಷ್ ನಗರದಲ್ಲಿ ನೆಲೆಸಿದೆ.
ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದರು. ಆದರೆ, ಮೇ 30 ರಾತ್ರಿ ಖುದ್ದೂಸ್ ಪಾಷಾ ಮತ್ತು ಅವರ ಮಗಳ ದೇಹವನ್ನು ಕೆರೆಯಿಂದ ಹೊರಗೆ ತೆಗೆದರು. ಅವರು ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದರು. ಬೆಳಗ್ಗೆ ತಾಯಿ ಮತ್ತು ಇನ್ನೊಂದು ಮಗುವಿನ ಮೃತದೇಹಗಳು ಪತ್ತೆಯಾಗಿವೆ.
ಓದಿ:ಪತಿಯೊಂದಿಗೆ ಜಗಳ: ಆರು ಮಕ್ಕಳ ಕೊಂದು ಬಾವಿಗೆ ಎಸೆದ ಪಾಪಿ ತಾಯಿ
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದರು. ಖುದ್ದೂಸ್ ಪಾಷಾ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಮೇ 30ರ ರಾತ್ರಿ ಖುದ್ದೂಸ್ ತನ್ನ ಪತ್ನಿ ಫಾತಿಮಾ ಜೊತೆ 10 ಸಾವಿರ ರೂಪಾಯಿ ಸಂಬಂಧ ಜಗಳವಾಡಿದ್ದಾರೆ. ಇವರ ಜಗಳ ವಿಕೋಪಕ್ಕೆ ತಿರುಗಿದ್ದು, ಖುದ್ದೂಸ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬೈಕ್ನಲ್ಲಿ ಕೂರ್ಮಲಗುಡ ಹೊಂಡಕ್ಕೆ ಕರೆದುಕೊಂಡು ಹೋಗಿದ್ದಾರೆ.
ಮೊದಲು ಪತ್ನಿ ಮತ್ತು ಮಕ್ಕಳನ್ನು ಬಲವಂತವಾಗಿ ಕೆರೆಗೆ ತಳ್ಳಿದ್ದಾನೆ. ಬಳಿಕ ಖುದ್ದೂಸ್ ಕೂಡ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ಕುರಿತು ನಾದರ್ ಗುಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.