ನವದೆಹಲಿ/ಹೈದರಾಬಾದ್: ಭತ್ತ ಖರೀದಿ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಪ್ರತಿಭಟನೆ ನಡೆಸುತ್ತಿದ್ದು, ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭತ್ತ ಬೆಳೆಯುವುದು ತೆಲಂಗಾಣ ರೈತರ ತಪ್ಪೇ? ಎಂದು ಪ್ರಶ್ನಿಸಿರುವಅವರು, ಅನ್ನದಾತರೊಂದಿಗೆ ಚೆಲ್ಲಾಟವಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ದೇಶದಲ್ಲಿ ರೈತರು ಕಣ್ಣೀರು ಹಾಕಿದಾಗಲೆಲ್ಲ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತದೆ ಎಂಬುದಕ್ಕೆ ಈ ಹಿಂದಿನ ಇತಿಹಾಸ ಸಾಕ್ಷಿ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಧಿಕಾರದಲ್ಲಿದ್ದಾಗ ರೈತರಿಗೆ ಅನ್ಯಾಯ ಮಾಡಬೇಡಿ ಎಂದಿರುವ ಕೆಸಿಆರ್, ನಿಮಗೆ ಮುಂದಿನ 24 ಗಂಟೆಗಳ ಕಾಲ ಸಮಯಾವಕಾಶ ನೀಡುತ್ತೇವೆ ಎಂದರು.
ಮೋದಿ ಅವರಿಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಲಿ. ಆದರೆ, ನಾನು ಪ್ರಧಾನಿ ಮತ್ತು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರ ಬಳಿ ಕೈಮುಗಿದು ಕೇಳಿಕೊಳ್ಳುತ್ತೇನೆ, ದಯವಿಟ್ಟು ನಮ್ಮ ಆಹಾರ ಧಾನ್ಯ ಖರೀದಿ ಮಾಡಿ. ಅದಕ್ಕಾಗಿ ಮುಂದಿನ 24 ಗಂಟೆಗಳ ಕಾಲ ಸಮಯಾವಕಾಶ ನೀಡುತ್ತೇನೆ. ಇದಾದ ಬಳಿಕ ನಮ್ಮ ನಿರ್ಧಾರ ನಾವು ಕೈಗೊಳ್ಳುತ್ತೇವೆ ಎಂದು ಹೇಳಿದರು. ಸರ್ಕಾರವನ್ನು ಉರುಳಿಸುವ ಶಕ್ತಿ ಇರುವ ರೈತರ ಭಾವನೆಗಳೊಂದಿಗೆ ಆಟವಾಡಬೇಡಿ. ಅವರು ಭಿಕ್ಷುಕರಲ್ಲ ಎಂದರು.
ಇದನ್ನೂ ಓದಿ:ಅಕ್ಕಿ ಖರೀದಿ ವಿಚಾರ: ಕೇಂದ್ರದ ವಿರುದ್ಧ ತೆಲಂಗಾಣ ಸಿಎಂ ನೇತೃತ್ವದಲ್ಲಿ ಟಿಆರ್‌ಎಸ್ ನಾಯಕರ ಪ್ರತಿಭಟನೆ
ತೆಲಂಗಾಣ ಮುಖ್ಯಮಂತ್ರಿ ನೇತೃತ್ವದಲ್ಲಿ ಟಿಆರ್‌ಎಸ್ ನಾಯಕರು ಸೋಮವಾರದಿಂದ ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರದ ವಿರುದ್ಧ ಅಹೋರಾತ್ರಿ ಧರಣಿ ಆರಂಭಿಸಿದ್ದು, ರೈತರ ಅಕ್ಕಿ ಖರೀದಿಗೆ ಒತ್ತಡ ಹಾಕುತ್ತಿದೆ. 2014ರಲ್ಲಿ ತೆಲಂಗಾಣದಲ್ಲಿ ಟಿಆರ್‌ಎಸ್ ಅಧಿಕಾರಕ್ಕೆ ಬಂದ ಬಳಿಕ ದೆಹಲಿಯಲ್ಲಿ ನಡೆಯುತ್ತಿರುವ ಮೊದಲ ಪ್ರತಿಭಟನಾ ಸಭೆ ಇದಾಗಿದೆ. ಪಕ್ಷದ ಸಂಸದರು, ಶಾಸಕರು, ಕ್ಯಾಬಿನೆಟ್ ಸಚಿವರು, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.