ಹೈದರಾಬಾದ್:ತೆಲಂಗಾಣ ವಿಧಾನಸಭೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆಗೂ ಮೊದಲೇ ಮುಖ್ಯಮಂತ್ರಿ ಕೆ.ಚಂದ್ರಶೇಖರ್ರಾವ್ ಅವರು ಭಾರತ್ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ಎಲ್ಲ 118 ಹುರಿಯಾಳುಗಳನ್ನು ಇಂದು (ಸೋಮವಾರ) ಘೋಷಿಸಿದರು. ಸ್ವತಃ ಅವರು ಗಜ್ವೆಲ್ ಮತ್ತು ಕಾಮರೆಡ್ಡಿಯ ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದರೆ, ಪುತ್ರ, ಸಚಿವ ಕೆ.ಟಿ.ರಾಮರಾವ್ ಸಿರ್ಸಿಲ್ಲಾದಿಂದ ಕಣಕ್ಕಿಳಿಯಲಿದ್ದಾರೆ.
ಬಿಆರ್‌ಎಸ್ ಪಕ್ಷದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭೆಗೆ ಪೂರ್ವ ಸಿದ್ಧತೆ ನಡೆಸಿದ್ದು, 7 ಸ್ಥಾನಗಳಲ್ಲಿ ಬದಲಾವಣೆ ಮಾಡಿ ಉಳಿದಂತೆ ಹಾಲಿ ಶಾಸಕರನ್ನೇ ಅಖಾಡಕ್ಕಿಳಿಸಿದ್ದಾರೆ. ಪಕ್ಷದ ರಾಜ್ಯ ಪ್ರಧಾನ ಕಚೇರಿ ತೆಲಂಗಾಣ ಭವನದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಅಸಮಾಧಾನಿತರಿಗೆ ಬೇರೆ ಹುದ್ದೆ:ರಾಷ್ಟ್ರೀಯ ಪಕ್ಷಗಳು ಸೇರಿ ಇತರ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ಹೆಣಗಾಡುತ್ತಿದ್ದರೆ, ತೆಲಂಗಾಣ ಸಿಎಂ ಚುನಾವಣೆ ಘೋಷಣೆಗೂ ಮೊದಲೇ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದ್ದಾರೆ. 119 ವಿಧಾನಸಭಾ ಸ್ಥಾನಗಳ ಪೈಕಿ ತಾವು ಎರಡು ಕ್ಷೇತ್ರ ಸೇರಿದಂತೆ 118 ಅಭ್ಯರ್ಥಿಗಳನ್ನು ಘೋಷಿಸಿದ್ದು, ಅಸಮಾಧಾನಿತರಿಗೆ ಬೇರೆ ಹುದ್ದೆ ನೀಡುವ ಭರವಸೆ ನೀಡಿದರು.
2018 ರ ಚುನಾವಣೆಯಲ್ಲಿ ಬಿಆರ್‌ಎಸ್ ಪಕ್ಷ 88 ಸ್ಥಾನಗಳಲ್ಲಿ ಏಕಮೇವವಾಗಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿತ್ತು. ಪ್ರತಿಸ್ಪರ್ಧಿ ಕಾಂಗ್ರೆಸ್ ಬರೀ 19 ಸ್ಥಾನ ಗೆದ್ದಿತ್ತು. ಬಿಜೆಪಿ ಶೂನ್ಯ ಸಂಪಾದನೆ ಮಾಡಿತ್ತು. ಇನ್ನಷ್ಟೇ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಬೇಕಿದೆ.