ಚೆನ್ನೈ (ತಮಿಳುನಾಡು):ಕಾರ್ಮಿಕರ ದಿನನಿತ್ಯದ ಕೆಲಸದ ಅವಧಿಯನ್ನು 12 ಗಂಟೆವರೆಗೂ ವಿಸ್ತರಿಸಲು ಅವಕಾಶವಿದ್ದ ಕಾರ್ಖಾನೆಗಳ (ತಿದ್ದುಪಡಿ) ಕಾಯ್ದೆ 2023 ಅನ್ನು ತಮಿಳುನಾಡು ಸರ್ಕಾರ ವಿಶ್ವ ಕಾರ್ಮಿಕ ದಿನವಾದ ಸೋಮವಾರ ಹಿಂಪಡೆದಿದೆ. ಕಾರ್ಮಿಕರ ವಿರೋಧ ಮತ್ತು ಅವರ ಹಿತಾಸಕ್ತಿಯ ರಕ್ಷಣೆಯ ದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
ಕಾರ್ಮಿಕರ ದಿನದ ಅಂಗವಾಗಿ ಮಾತನಾಡಿದ ಮುಖ್ಯಮಂತ್ರಿ, ತಿದ್ದುಪಡಿ ಮಾಡಿದ್ದ ಕಾರ್ಖಾನೆಗಳ ಕಾಯ್ದೆಯಲ್ಲಿ ಕೆಲಸದ ಸಮಯವನ್ನು 8 ಗಂಟೆಯಿಂದ 12 ಗಂಟೆವರೆಗೆ ವಿಸ್ತರಿಸಲು ಅವಕಾಶವಿತ್ತು. ಇದಕ್ಕೆ ಹಲವಾರು ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದವು. ಇದರಿಂದ ಕಾಯ್ದೆಯನ್ನು ಹಿಂಪಡೆದಿದ್ದೇವೆ ಎಂದರು. ಕೇವಲ ಬದಲಾವಣೆ ಸುಧಾರಣೆ ತರಲು ಮಾತ್ರವಲ್ಲ, ಒಮ್ಮತದ ಅಭಿಪ್ರಾಯಗಳನ್ನು ಸ್ವೀಕರಿಸಲು ಧೈರ್ಯ ಬೇಕೆ ಎಂದು ಹೇಳಿದರು.
ತಿದ್ದುಪಡಿ ಕಾಯ್ದೆ ಹಿಂಪಡೆಯುವುದನ್ನು ಅಪಮಾನ ಎಂದು ಭಾವಿಸುವುದಿಲ್ಲ. ಕಾರ್ಮಿಕರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಹಿಂಪಡೆದಿರುವುದಕ್ಕೆ ಹೆಮ್ಮೆ ಇದೆ. ಏಕೆಂದರೆ ಕೇವಲ ನಿಯಮಗಳನ್ನು ತರುವುದು ಮಾತ್ರವಲ್ಲ, ಅವುಗಳನ್ನು ಹಿಂಪಡೆಯಲು ಕೂಡಾ ಧೈರ್ಯ ಬೇಕಾಗುತ್ತದೆ. ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ನಮಗೆ ಆ ರೀತಿಯ ಮಾರ್ಗದರ್ಶನ ನೀಡಿದ್ದಾರೆ. ಕಾರ್ಮಿಕ ಸಂಘಟನೆಗಳಿಂದ ವಿರೋಧ ವ್ಯಕ್ತಪಡಿಸಿದ ಎರಡು ದಿನಗಳಲ್ಲೇ ನಿರ್ಧಾರ ಹಿಂಪಡೆಯಲಾಗಿದೆ ಎಂದು ಸ್ಟಾಲಿನ್ ತಿಳಿಸಿದರು.