ಚೆನ್ನೈ (ತಮಿಳುನಾಡು):ವೈದ್ಯರೊಬ್ಬರಿಂದ 20 ಲಕ್ಷ ರೂಪಾಯಿ ಲಂಚ ಸ್ವೀಕರಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಯೊಬ್ಬರನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಬಂಧಿತ ಅಧಿಕಾರಿಯನ್ನು ಅಂಕಿತ್ ತಿವಾರಿ ಎಂದು ಗುರುತಿಸಲಾಗಿದೆ. ನಗದು ಸಹಿತ ಕೇಂದ್ರೀಯ ಸಂಸ್ಥೆ ನೀಡಿದ ಅಧಿಕೃತ ಗುರುತಿನ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ.
ದಿಂಡುಗಲ್ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅಧೀಕ್ಷಕರಾಗಿರುವ ಡಾ.ಸುರೇಶ್ ಬಾಬು ಎಂಬುವರು ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪ ಎದುರಿಸಿದ್ದರು. 2018ರಲ್ಲಿ ಮಧ್ಯಪ್ರದೇಶದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಯಾಗಿ ನೇಮಕಗೊಂಡಿದ್ದ ಅಂಕಿತ್ ತಿವಾರಿ, ಇದೇ ವರ್ಷ ಏಪ್ರಿಲ್ನಲ್ಲಿ ಮಧುರೈಗೆ ವರ್ಗಾವಣೆಯಾಗಿ ಬಂದಿದ್ದಾರೆ.
ಡಾ.ಸುರೇಶ್ ಬಾಬು ಅವರನ್ನು ಪ್ರಕರಣದಿಂದ ರಕ್ಷಿಸಲು ಅಂಕಿತ್ ತಿವಾರಿ ಮೂರು ಕೋಟಿ ರೂಪಾಯಿ ಲಂಚ ಕೇಳಿದ್ದರು. ಈ ಹಣವನ್ನು ಜಾರಿ ನಿರ್ದೇಶನಾಲಯಕ್ಕೆ ಒಪ್ಪಿಸುವುದಾಗಿ ಹೇಳಿದ್ದರು ಎನ್ನಲಾಗಿದೆ. ಆದರೆ, ಇಷ್ಟೊಂದು ಹಣಕ್ಕೆ ಕೊಡಲು ಡಾ.ಸುರೇಶ್, ಚೌಕಾಸಿ ನಡೆಸಿ ಕೊನೆಗೆ 51 ಲಕ್ಷ ನೀಡಲು ತೀರ್ಮಾನಿಸಲಾಗಿತ್ತು. ಅಂತೆಯೇ, ನವೆಂಬರ್ 1ರಂದು 20 ಲಕ್ಷ ರೂ.ಗಳನ್ನು ನೀಡಿದ್ದರು. ಉಳಿದ ಮೊತ್ತದ ಸಂಬಂಧ ನಿನ್ನೆ, ನ.30ರಂದು ಅಂಕಿತ್ ತಿವಾರಿ ವಾಟ್ಸ್ಆ್ಯಪ್ ಕರೆ ಮಾಡಿ ವೈದ್ಯರನ್ನು ಕೇಳಿದ್ದಾರೆ.
ಆದರೆ, ಈ ಬಗ್ಗೆ ಸುರೇಶ್ ಬಾಬು ದಿಂಡುಗಲ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ. ಈ ವೇಳೆ, ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ನೀಡಿದ ಸಲಹೆಯಂತೆ ಇಂದು, ಡಿಸೆಂಬರ್ 1ರಂದು ದಿಂಡಿಗಲ್ನ ಮಧುರೈ ಬೈಪಾಸ್ ರಸ್ತೆಯಲ್ಲಿ 20 ಲಕ್ಷ ರೂ. ಹಣ ನೀಡುವಂತೆ ಕರೆಸಿದ್ದಾರೆ. ಆಗ ಅಧಿಕಾರಿಯ ಕಾರಿನಲ್ಲಿ ಪಡೆಯಲು ಪ್ರಯತ್ನಿಸಿದಾಗ, ಪೊಲೀಸರು ದಾಳಿ ಮಾಡಿದ್ದಾರೆ. ಆದರೆ, ಅಷ್ಟರಲ್ಲೇ, ಅಂಕಿತ್ ತಿವಾರಿ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ.
ನಂತರ ದಿಂಡಿಗಲ್ನಿಂದ ಮಧುರೈಗೆ ಹೋಗುವ ರಸ್ತೆಯ ಕೊಡೈ ರಸ್ತೆಯಲ್ಲಿರುವ ಟೋಲ್ ಗೇಟ್ ಬಳಿ ಕಾರನ್ನು ತಡೆದಿದ್ದಾರೆ. ಬಳಿಕ ದಿಂಡುಗಲ್ ಕಚೇರಿಗೆ ಇಡಿ ಅಧಿಕಾರಿಯನ್ನು ಕರೆತಂದು ಬಂಧಿಸಿದ್ದಾರೆ. ಅಲ್ಲದೇ, ಆತನಿಂದ 20 ಲಕ್ಷ ರೂಪಾಯಿ ಹಣ ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಹೆಚ್ಚಿನ ತನಿಖೆಗಾಗಿ ಮಧುರೈನ ಜಾರಿ ನಿರ್ದೇಶನಾಲಯದ ಸಹಾಯಕ ವಲಯ ಕಚೇರಿಗೂ ಭೇಟಿ ನೀಡಿದ್ದಾರೆ.
ಬಂಧಿತ ಇಡಿ ಅಧಿಕಾರಿ ಮಧುರೈ ಉಪವಲಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರು ಬಳಸುತ್ತಿದ್ದ ಕೊಠಡಿಗಳನ್ನು ಪರಿಶೀಲಿಸಲು ಅಧಿಕಾರಿಗಳು ಅನುಮತಿ ಕೋರಿದ್ದಾರೆ. ಆದರೆ, ಉನ್ನತ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಶೋಧಕ್ಕೆ ಅವಕಾಶ ಇಲ್ಲ ಎಂದು ಕಚೇರಿಯಲ್ಲಿದ್ದ ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಹಳ ಹೊತ್ತು ಕಾದಿದ್ದಾರೆ. ಈ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ಪೊಲೀಸರು ಜಮಾಯಿಸಿದ್ದರು. ಇದೇ ವೇಳೆ ಇಡಿ ಪರ ವಕೀಲರು ಕೂಡ ಕಚೇರಿಗೆ ಆಗಮಿಸಿದ್ದಾರೆ. ಅಂತಿಮವಾಗಿ ಶೋಧ ಕಾರ್ಯ ಅನುಮತಿ ನೀಡಿದ್ದು, ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ತಮ್ಮ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ: ನಟ ಪ್ರಕಾಶ್ ರಾಜ್ಗೆ ಇಡಿ ಸಮನ್ಸ್