ಚೆನ್ನೈ:ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಥಾನ ಹಂಚಿಕೆ ಕುರಿತು ಮಾತುಕತೆ ನಡೆಸಿರುವ ಡಿಎಂಕೆ ಪಕ್ಷವು ತನ್ನ ಮೈತ್ರಿ ಪಕ್ಷವಾದ ಕಾಂಗ್ರೆಸ್ಗೆ 25 ಸ್ಥಾನಗಳನ್ನು ನೀಡಿರುವುದಾಗಿ ತಿಳಿಸಿದೆ.
ಕಾಂಗ್ರೆಸ್ಗೆ 25 ಸೀಟ್ಗಳನ್ನು ನೀಡಲಾಗಿದ್ದು, ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಸ್ಟಾಲಿನ್ ಸಮ್ಮುಖದಲ್ಲಿ ಸ್ಥಾನ ಹಂಚಿಕೆಯ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ಕೆ ಎಸ್ ಆಳಗಿರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಎಐಎಡಿಎಂಕೆ-ಬಿಜೆಪಿ-ಪಿಎಂಕೆ ಸರ್ಕಾರ ರಚನೆ: ಅಮಿತ್ ಶಾ
ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡಿನ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್, ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಆ ಪಕ್ಷವನ್ನು ನಾಶಮಾಡುವುದು ಬಿಜೆಪಿಯ ಉದ್ದೇಶವಾಗಿದೆ. ಬಿಜೆಪಿಯವರು ಎಲ್ಲಾ ವಿರೋಧ ಪಕ್ಷಗಳನ್ನು ನಾಶಗೊಳಿಸಲು ಬಯಸುತ್ತಾರೆ ಎಂದು ಆರೋಪಿಸಿದರು.
ದೇಶದಲ್ಲಿ 'ಒಂದು ಪಕ್ಷ-ಒಬ್ಬ ವ್ಯಕ್ತಿಯ ಆಡಳಿತ' (one party-one man rule) ಜಾರಿಗೆ ತರುವುದೇ ಬಿಜೆಪಿಯ ಗುರಿ. ಆದರೆ ಈ ಬಾರಿ ಕಾಂಗ್ರೆಸ್, ಡಿಎಂಕೆ ಹಾಗೂ ಎಡಪಕ್ಷಗಳು ಜೊತೆಯಾಗಿ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಗೆಲ್ಲಲಿದ್ದೇವೆ ಎಂದು ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.