ಜೈಪುರ(ರಾಜಸ್ಥಾನ್):ಉದಯಪುರದಲ್ಲಿ ಧರ್ಮದ ಹೆಸರಿನಲ್ಲಿ ಹಿಂದು ವ್ಯಕ್ತಿಯ ಭೀಕರ ಹತ್ಯೆ ಘಟನೆಯ ಹಿಂದೆ ಪಾಕಿಸ್ತಾನದ ಕೈವಾಡ ಇರುವ ಬಗ್ಗೆ ಸುಳಿವು ಸಿಕ್ಕಿದೆ. ಹತ್ಯೆಕೋರರಲ್ಲಿ ಒಬ್ಬನಾದ ಗೌಸ್ ಮಹಮದ್ 45 ದಿನ ಪಾಕಿಸ್ತಾನದಲ್ಲಿ ಉಳಿದುಕೊಂಡಿದ್ದ. ಅಲ್ಲದೇ, ಹಂತಕ ಅರಬ್ ದೇಶಗಳು, ನೇಪಾಳಕ್ಕೂ ಹೋಗಿ ಬಂದಿದ್ದ ಎಂದು ತಿಳಿದು ಬಂದಿದೆ.
ಹಂತಕ ಗೌಸ್ ಮಹಮ್ಮದ್ ಪಾಕಿಸ್ತಾನದೊಂದಿಗೆ ನೇರ ಸಂಪರ್ಕ ಹೊಂದಿದ್ದ. ಈತನೊಂದಿಗೆ ರಿಯಾಜ್ ಜಬ್ಬಾರ್ ಕೂಡ ಪಾಕಿಸ್ತಾನದ ವ್ಯಕ್ತಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಇಬ್ಬರೂ ಸೇರಿ ಪಾಕಿಸ್ತಾನದ 8-10 ಸಂಪರ್ಕ ಸಂಖ್ಯೆಗಳೊಂದಿಗೆ ಮಾತನಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಈ ಬಗ್ಗೆ ರಾಜಸ್ಥಾನದ ಗೃಹ ಸಚಿವ ರಾಜೇಂದ್ರ ಯಾದವ್ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದು, ಹಂತಕ ಗೌಸ್ ಮಹಮ್ಮದ್ 2014 ರಲ್ಲಿ ಪಾಕಿಸ್ತಾನದ ಕರಾಚಿಗೆ ತೆರಳಿ 45 ದಿನ ತರಬೇತಿ ಪಡೆದು ಬಂದಿದ್ದಾನೆ. ಅಷ್ಟೇ ಅಲ್ಲದೇ, 2018-19 ರಲ್ಲಿ ಈತ ಅರಬ್ ದೇಶಗಳಿಗೂ ಹೋಗಿದ್ದ. ಕಳೆದ ವರ್ಷ ನೇಪಾಳದಲ್ಲೂ ಈತನಿದ್ದ ಎಂಬುದಕ್ಕೆ ಸಾಕ್ಷಿಗಳು ಸಿಕ್ಕಿವೆ ಎಂದು ತಿಳಿಸಿದ್ದಾರೆ.
ಇನ್ನಷ್ಟು ಜನರಿರುವ ಶಂಕೆ:ಪ್ರಕರಣದ ಸಂಪೂರ್ಣ ತನಿಖೆಯನ್ನು ಎನ್ಐಎ ವಹಿಸಿಕೊಂಡಿದೆ. ರಾಜ್ಯ ಸರ್ಕಾರವೂ ಕೂಡ ಎಸ್ಐಟಿ ರಚಿಸಿದೆ. ಹತ್ಯೆಯ ಹಿಂದೆ ಇನ್ನಷ್ಟು ಜನರು ಇರುವ ಶಂಕೆ ಇದೆ. ಅವರು ರಾಜಸ್ಥಾನದಲ್ಲೇ ಉಳಿದಿದ್ದಾರೆ ಎನ್ನಲಾಗ್ತಿದೆ. ಹಂತಕರು ಇವರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತನಿಖಾ ಸಂಸ್ಥೆಗಳು ಇವರ ಜಾಡು ಹಿಡಿದು ಹೊರಟಿವೆ ಎಂದು ಹೇಳಿದರು.