ನವದೆಹಲಿ :ಸ್ವತಂತ್ರ ಭಾರತದ ಮೊದಲ ಜಾತಿಗಣತಿ ವರದಿಯನ್ನು ಬಿಹಾರ ಸರ್ಕಾರ ಪ್ರಕಟಿಸಿದ್ದು ವಿವಾದಕ್ಕೆ ಕಾರಣವಾಗಿದೆ. ದೇಶವನ್ನು ಜಾತಿಯ ಆಧಾರದ ಇಬ್ಭಾಗ ಮಾಡಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಕೆಲವು ಸಂಘಟನೆಗಳು ದೇಶದಲ್ಲಿ ಜಾತಿಗಣತಿ ನಡೆಸಬಹುದೇ, ಈ ಪ್ರಕ್ರಿಯೆ ಸಿಂಧುವೇ ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿವೆ. ಈ ಕುರಿತ ಅರ್ಜಿಯನ್ನು ಕೋರ್ಟ್ ಅಕ್ಟೋಬರ್ 6 ರಂದು ವಿಚಾರಣೆ ನಡೆಸಲಿದೆ.
ಏಕ್ ಸೋಚ್ ಏಕ್ ಪ್ರಯಾಸ್ ಮತ್ತು ಯೂತ್ ಫಾರ್ ಈಕ್ವಾಲಿಟಿ ಸೇರಿ ಮುಂತಾದ ಸಂಘಟನೆಗಳು ಜಾತಿ ಆಧಾರಿತ ಸಮೀಕ್ಷೆಯ ಕಾನೂನುಬದ್ಧತೆ ಮತ್ತು ರಾಜ್ಯಗಳ ಅಧಿಕಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. 1948 ರ ಜನಗಣತಿ ಕಾಯ್ದೆಯು ದೇಶದಲ್ಲಿ ಕೇಂದ್ರ ಸರ್ಕಾರವೇ ಜನಗಣತಿ ನಡೆಸಬೇಕು ಎಂಬ ವಿಶೇಷಾಧಿಕಾರ ನೀಡಿದೆ. ಹಾಗಿದ್ದಾಗ ರಾಜ್ಯ ಸರ್ಕಾರಗಳು ಜಾತಿಗಣತಿ ನಡೆಸುವ ಹಕ್ಕು ಹೊಂದಿವೆಯೇ ಎಂದು ಪ್ರಶ್ನಿಸಿವೆ.
ಜಾತಿ ಸಮೀಕ್ಷೆ ವಿರುದ್ಧದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ.ಎನ್.ಭಟ್ಟಿ ಅವರಿದ್ದ ಪೀಠದ ಮುಂದೆ ತರಲಾಯಿತು. ಈ ಕುರಿತ ವಿಚಾರಣೆಯನ್ನು ಅಕ್ಟೋಬರ್ 6 ರಂದು ನಡೆಸಲಾಗುವುದು ಎಂದು ಹೇಳಿತು.
ಸಮೀಕ್ಷೆ ವಿರುದ್ಧ ಕೇಂದ್ರ ಸರ್ಕಾರದ ಅಫಿಡವಿಟ್:ಬಿಹಾರ ಸಿಎಂ ನಿತೀಶ್ ಕುಮಾರ್ ಸರ್ಕಾರ ಜಾತಿಗಣತಿಯನ್ನು ನಡೆಸಿ ವರದಿ ಪ್ರಕಟಿಸಿದ್ದರ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಈ ಮೂಲಕ ಕಾನೂನು ಹೋರಾಟಕ್ಕೆ ಮುಂದಾಗಿದೆ. ಸಾಂವಿಧಾನಿಕ ನಿಬಂಧನೆಗಳು ಮತ್ತು ಕಾನೂನುಗಳ ಪ್ರಕಾರ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಮತ್ತು ಇತರ ಹಿಂದುಳಿದ ವರ್ಗಗಳನ್ನು ಮೇಲೆತ್ತಲು ಸರ್ಕಾರ ಬದ್ಧ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.