ಕೊಚ್ಚಿ/ಕೇರಳ:ರಾಜ್ಯದಲ್ಲಿ ವರದಕ್ಷಿಣೆ ಪಿಡುಗಿನ ವಿರುದ್ಧ ಹೋರಾಡಲು ಕೇರಳ ಸರ್ಕಾರ ಮುಂದಾಗಿದೆ. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು'' ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡುವ ಮೊದಲು ವರದಕ್ಷಿಣೆ ಪಡೆಯುವುದಿಲ್ಲ ಮತ್ತು ನೀಡುವುದಿಲ್ಲ'' ಎಂಬ ಬಾಂಡ್‌ಗೆ ಸಹಿ ಹಾಕಿಸಿಕೊಳ್ಳುವಂತೆ ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಸೂಚಿಸಿದ್ದಾರೆ.
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳೊಂದಿಗಿನ ಸಭೆಯಲ್ಲಿ, ಉಪಕುಲಪತಿಗಳು ಕಾಲೇಜು ಪ್ರವೇಶಾತಿ ಸಮಯದಲ್ಲಿ ವಿದ್ಯಾರ್ಥಿಗಳ ಪೋಷಕರಿಂದಲೂ ಬಾಂಡ್‌ಗೆ ಸಹಿ ಹಾಕಿಸಿಕೊಳ್ಳಬೇಕು.. ಅಷ್ಟೇ ಅಲ್ಲ, ಪದವಿ ನೀಡುವ ಮೊದಲು ಸಹ ಬಾಂಡ್‌ಗೆ ಸಹಿ ಹಾಕುವಂತೆ ಕೇಳಿಕೊಳ್ಳಬೇಕು ಎಂದು ರಾಜ್ಯಪಾಲರಿಗೆ ಸಲಹೆ ನೀಡಿದರು.
ಈ ಸಲಹೆ ಸ್ವೀಕರಿಸಿದ ರಾಜ್ಯಪಾಲರು, ವಿಶ್ವವಿದ್ಯಾನಿಲಯಗಳಿಗೆ ನೇಮಕಗೊಳ್ಳುವ ಎಲ್ಲಾ ಸಿಬ್ಬಂದಿಗೂ ಬಾಂಡ್‌ಗೆ ಸಹಿ ಹಾಕುವಂತೆ ಕೇಳಬೇಕು ಎಂದು ಸೂಚಿಸಿದ್ದಾರೆ. ಈ ''ವರದಕ್ಷಿಣೆ ವಿರೋಧಿ"ಬಾಂಡ್‌ಗೆ ಸಹಿ ಮಾಡುವುದನ್ನು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಬೋಧಕವರ್ಗ ಸಹ ವರದಕ್ಷಿಣೆ ಮುಟ್ಟುವುದಿಲ್ಲ ಮತ್ತು ನೀಡುವುದಿಲ್ಲ ಎಂಬ ಬಾಂಡ್‌ಗೆ ಸಹಿ ಹಾಕಬೇಕು ಎಂದಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಸಲಹೆಯ ಬಗ್ಗೆ ಉತ್ಸಾಹ ತೋರಿದ್ದಾರೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
'ಮದುವೆ ಎಂಬ ಮಾರುಕಟ್ಟೆಯಲ್ಲಿ ಮದುಮಗನ ಬೆಲೆಯನ್ನು ಹೆಚ್ಚಿಸಲು ವಿಶ್ವವಿದ್ಯಾಲಯಗಳು ತಮ್ಮ ಪದವಿಯನ್ನು ಪರವಾನಗಿಯಾಗಿ ಬಳಸಲು ಅನುಮತಿಸಬಾರದು' ಎಂದು ರಾಜ್ಯಪಾಲರು ಹೇಳಿದ್ದಾರೆ. "ಇದು ಮಹಿಳೆಯರ ಸಮಸ್ಯೆಯಲ್ಲ. ಇದು ಮನುಷ್ಯರ ಸಮಸ್ಯೆ. ಏಕೆಂದರೆ ನೀವು ಮಹಿಳೆಯನ್ನು ಶೋಷಿಸಿದರೆ ಸಮಾಜ ಅಧೋಗತಿಗೆ ಇಳಿಯುತ್ತದೆ. ವರದಕ್ಷಿಣೆ ಬೇಡಿಕೆ ಸ್ತ್ರೀತ್ವಕ್ಕೆ ಅಸಹ್ಯಕರವಾಗಿದೆ. ಇದು ಮಾನವನ ಘನತೆಗೆ ಅಸಹ್ಯಕರವಾಗಿದೆ" ಎಂದು ರಾಜ್ಯಪಾಲರು ಉಲ್ಲೇಖಿಸಿದ್ದಾರೆ.
ಇದಕ್ಕೂ ಮುನ್ನ ಜುಲೈ 14 ರಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು "ವರದಕ್ಷಿಣೆ ವಿರುದ್ಧ ಉಪವಾಸ" ಸಹ ಮಾಡಿದರು ಮತ್ತು ತಿರುವನಂತಪುರಂನ ಗಾಂಧಿ ಭವನದಲ್ಲಿ ಗಾಂಧಿವಾದಿ ಸಂಘಟನೆಗಳು ಆಯೋಜಿಸಿದ್ದ ಪ್ರಾರ್ಥನಾ ಸಭೆಯಲ್ಲೂ ಭಾಗವಹಿಸಿದ್ದರು. ವರದಕ್ಷಿಣೆ ಶಿಕ್ಷಾರ್ಹ ಅಪರಾಧ. ಆದ್ದರಿಂದ ವಿಶ್ವವಿದ್ಯಾಲಯಗಳು ಕಾನೂನನ್ನು ಎತ್ತಿಹಿಡಿಯಬೇಕು ಎಂದು ಖಾನ್ ಹೇಳಿದರು.
ಸಾಕ್ಷರತೆ ಪ್ರಮಾಣ ಮತ್ತು ಜೀವಿತಾವಧಿಯಂತಹ ಸೂಚ್ಯಾಂಕಗಳಲ್ಲಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿರುವ ನಮ್ಮ ರಾಜ್ಯದಲ್ಲಿ ವರದಕ್ಷಿಣೆ ಭೀಕರತೆ ಮಾತ್ರ ಹೆಚ್ಚುತ್ತಲೇ ಇದೆ ಎಂದು ಕೇರಳ ರಾಜ್ಯಪಾಲರು ವಿಷಾದ ವ್ಯಕ್ತಪಡಿಸಿದ್ರು. "ನಮ್ಮ ಪ್ರೀತಿಯ ಕೇರಳ ರಾಜ್ಯವು ವರದಕ್ಷಿಣೆ ಕಾರಣದಿಂದಾದ ಒಂದು ದುರಂತ ಸಾವಿನಿಂದಾಗಿ ಸುದ್ದಿಯಲ್ಲಿತ್ತು" ಎಂದು ರಾಜ್ಯಪಾಲರು ಬೇಸರ ವ್ಯಕ್ತಪಡಿಸಿದ್ರು.