ಕರ್ನಾಟಕ

karnataka

ETV Bharat / bharat

ಸನಾತನ ಧರ್ಮದ ಕುರಿತು ಹೇಳಿಕೆ: ಸಚಿವ ಉದಯನಿಧಿ ಸ್ಟಾಲಿನ್​ಗೆ ಸುಪ್ರೀಂ ಕೋರ್ಟ್​ನಿಂದ ನೋಟಿಸ್​ ಜಾರಿ - ಸಚಿವ ಉದಯನಿಧಿ ಸ್ಟ್ಯಾಲಿನ್

ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ಸಂಬಂಧ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್​ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ಕೋರಿ ವಕೀಲ ಬಿ ಜಗನ್ನಾಥ್​ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

Supreme Court
ಸುಪ್ರೀಂ ಕೋರ್ಟ್​

By ETV Bharat Karnataka Team

Published : Sep 22, 2023, 5:09 PM IST

ನವದೆಹಲಿ: ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್​ ಅವರಿಗೆ ಸುಪ್ರೀಂ ಕೋರ್ಟ್​ ಶುಕ್ರವಾರ ನೋಟಿಸ್​ ಜಾರಿ ಮಾಡಿದೆ. ಉದಯನಿಧಿ ಸ್ಟಾಲಿನ್​ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ಹಾಗೂ ಸನಾತನ ಧರ್ಮ, ಹಿಂದೂ ಧರ್ಮದ ವಿರುದ್ಧ ಉದಯನಿಧಿ ಮತ್ತು ಅವರ ಬೆಂಬಲಿಗರು ಯಾವುದೇ ದ್ವೇಷದ ಭಾಷಣ ಮಾಡದಂತೆ ತಡೆ ನೀಡಬೇಕೆಂದು ಕೋರಿ ಚೆನ್ನೈ ಮೂಲದ ವಕೀಲ ಬಿ ಜಗನ್ನಾಥ್​ ಅವರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್​ ಹಾಗೂ ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ದಾಮಾ ಶೇಷಾದ್ರಿ ನಾಯ್ಡು, ಸಚಿವರು ಇನ್ನೊಬ್ಬರ ನಂಬಿಕೆಯ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ. ಅವರೊಬ್ಬ ಸರ್ಕಾರದ ವ್ಯಕ್ತಿಯಾಗಿದ್ದುಕೊಂಡು, ಒಂದು ರಾಜ್ಯ, ಶಾಲಾ ವಿದ್ಯಾರ್ಥಿಗಳಿಗೆ ಧರ್ಮವೊಂದು ತಪ್ಪು ಎನ್ನುವ ಹೇಳಿಕೆ ಕೊಟ್ಟಿದ್ದಾರೆ. ಅಂತಹ ಯಾವುದೇ ಹೇಳಿಕೆ ನೀಡದಂತೆ ಸಚಿವ ಉದಯನಿಧಿ ಸ್ಟಾಲಿನ್​ ವಿರುದ್ಧ ತಡೆಯಾಜ್ಞೆ ಹಾಗೂ ಅವರ ವಿರುದ್ಧ ಎಫ್​ಐಆರ್​ ದಾಖಲಿಸಬೇಕು ಎಂದು ವಾದ ಮಂಡಿಸಿದರು.

ಇದಕ್ಕೆ ನ್ಯಾಯಪೀಠವು, ನಾವು ನೋಟಿಸ್​ ನೀಡುತ್ತಿದ್ದರೂ, ಮತ್ತೆ ಎಫ್​ಐಆರ್​ ದಾಖಲಿಸುವಂತೆ ಒತ್ತಾಯಿಸುವ ಮೂಲಕ ಸುಪ್ರೀಂ ಕೋರ್ಟ್​ ಅನ್ನು ಪೊಲೀಸ್​ ಠಾಣೆಯಾಗಿ ಪರಿವರ್ತಿಸುತ್ತಿದ್ದೀರಿ. ನೀವು ಹೈಕೋರ್ಟ್​ಗೆ ಹೋಗಬೇಕಿತ್ತು. ನಿಮ್ಮ ಕಕ್ಷಿದಾರರು ಹೈಕೋರ್ಟ್​ನಲ್ಲಿ ಈ ವಿಷಯವನ್ನು ಯಾಕೆ ಮುಂದುವರಿಸಬಾರದು ಎಂದು ಪ್ರಶ್ನಿಸಿತು.

ಆಗ ವಕೀಲ ನಾಯ್ಡು, ಸ್ಟಾಲಿನ್​ ಅವರು ಸಚಿವರಾಗಿರುವುದರಿಂದ ಸುಪ್ರೀಂ ಕೋರ್ಟ್​ಗೆ ಬಂದೆವು. ಅದಲ್ಲದೆ ನಮ್ಮ ಕಕ್ಷಿದಾರರು ಎಫ್​ಐಆರ್​ ದಾಖಲಿಸಲು ಹೋದಾಗ ಯಾರೂ ಕೂಡ ಎಫ್​ಐಆರ್​ ದಾಖಲಿಸಿಕೊಂಡಿಲ್ಲ. ಹಾಗಾಗಿ ಇಲ್ಲಿಗೆ ಬರಬೇಕಾಯಿತು ಎಂದು ತಿಳಿಸಿದರು.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್​ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್​ ಕಳೆದ ತಿಂಗಳು, ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ್ದರು. ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ರೋಗದಂತೆ ಅದನ್ನು ವಿರೋಧಿಸುವುದು ಮಾತ್ರವಲ್ಲದೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಈ ಹೇಳಿಕೆ ದೇಶದಾದ್ಯಂತ ವಿವಾದ ಎಬ್ಬಿಸಿತ್ತು.

ಉದಯನಿಧಿ ಸ್ಟಾಲಿನ್​ ಅವರು ನಂತರದಲ್ಲಿ ತಮ್ಮ ಹೇಳಿಕೆಯಿಂದ ತಾವು ಹಿಂದೆ ಸರಿಯುವುದಿಲ್ಲ ಎಂದು ಹೇಳಿ ಸಮರ್ಥಿಸಿಕೊಂಡಿದ್ದರು. ಹೇಳಿಕೆಗಳ ವಿಚಾರದಲ್ಲಿ ಕಾನೂನು ಕ್ರಮ ಎದುರಿಸಲು ಸಿದ್ಧ ಹಾಗೂ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿಯೂ ಹೇಳಿದ್ದರು.

ಇದನ್ನೂ ಓದಿ :ಸನಾತನ ಧರ್ಮವು ಉನ್ನತ ಕರ್ತವ್ಯಗಳ ಗುಚ್ಛ.. ಅಭಿವ್ಯಕ್ತಿ ಸ್ವಾತಂತ್ರ್ಯ ದ್ವೇಷ ಭಾಷಣವಾಗಬಾರದು: ಮದ್ರಾಸ್​ ಹೈಕೋರ್ಟ್​

ABOUT THE AUTHOR

...view details