ಪಾಟ್ನಾ(ಬಿಹಾರ) : ಜಾತಿ ಗಣತಿ ಕುರಿತು ಶೀಘ್ರ ವಿಚಾರಣೆ ನಡೆಸುವಂತೆ ಬಿಹಾರ ಸರ್ಕಾರ ಶುಕ್ರವಾರ ಪಾಟ್ನಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜಾತಿ ಗಣತಿಯನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠದಿಂದಲೇ ವಿಚಾರಣೆ ನಡೆಸುವಂತೆ ಸರ್ಕಾರ ಈ ಅರ್ಜಿಯನ್ನು ಸಲ್ಲಿಸಿದೆ. ಗುರುವಾರ ಪಾಟ್ನಾ ಹೈಕೋರ್ಟ್, ತನ್ನ ಮಧ್ಯಂತರ ಆದೇಶದಲ್ಲಿ ಮುಂದಿನ ವಿಚಾರಣೆಯನ್ನ ಜುಲೈ 3 ಕ್ಕೆ ನಿಗದಿ ಮಾಡಿತ್ತು. ಅಲ್ಲಿವರೆಗೂ ಜಾತಿ ಗಣತಿಗೆ ತಕ್ಷಣದ ತಡೆಯಾಜ್ಞೆಯನ್ನು ನೀಡಿತ್ತು.
ಹೈಕೋರ್ಟ್ ತಡೆಯಾಜ್ಞೆ : ಅದರ ನಂತರ ಇಂದು ಬಿಹಾರ ಸರ್ಕಾರದ ಪರವಾಗಿ ಅದರ ಆರಂಭಿಕ ವಿಚಾರಣೆಗಾಗಿ ಮುಖ್ಯ ನ್ಯಾಯಾಧೀಶರಿಗೆ ಈ ಅರ್ಜಿಯನ್ನು ಸಲ್ಲಿಸಲಾಗಿದೆ. ಸಾಮಾನ್ಯ ಆಡಳಿತದ ಉಪ ಕಾರ್ಯದರ್ಶಿ ರಜನೀಶ್ ಕುಮಾರ್ ಅಫಿಡವಿಟ್ ಸಲ್ಲಿಸಿದ್ದಾರೆ. ಬಿಹಾರದಲ್ಲಿ ಎರಡು ಹಂತಗಳಲ್ಲಿ ಜಾತಿ ಗಣತಿ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಮನೆಗಳನ್ನು ಗಣತಿ ಮಾಡಿ ವಿಶಿಷ್ಟ ಸಂಖ್ಯೆಗಳನ್ನು ನೀಡಲಾಗಿದೆ. ಎರಡನೇ ಹಂತದ ಸಮೀಕ್ಷೆ ಏಪ್ರಿಲ್ 15ರಿಂದ ಆರಂಭವಾಗಿದೆ. ಮೇ 15ರೊಳಗೆ ಗಣತಿ ಪೂರ್ಣಗೊಳ್ಳಬೇಕಿತ್ತು. ಇದೀಗ ಎಣಿಕೆ ಕಾರ್ಯಕ್ಕೆ ಹೈಕೋರ್ಟ್ ನಿಷೇಧ ಹೇರಿದೆ. ಜುಲೈ 3 ರಂದು ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗಿದೆ.
ಇಲ್ಲಿಯವರೆಗೂ ನಡೆದಿದ್ದೇನು?: ಬಿಹಾರದಲ್ಲಿ ಕಳೆದ ವರ್ಷವಷ್ಟೇ ಜಾತಿ ಗಣತಿ ಆರಂಭಿಸಲು ನಿತೀಶ್ ಕುಮಾರ್ ಸರ್ಕಾರ ನಿರ್ಧರಿಸಿತ್ತು. ಜೂನ್ 9, 2022 ರಂದು ಬಿಹಾರ ಸರ್ಕಾರವು ಜಾತಿ ಆಧಾರಿತ ಗಣತಿಯನ್ನು ನಡೆಸಲು ಅಧಿಸೂಚನೆ ಹೊರಡಿಸಿತ್ತು. ಗಣತಿಗೆ 500 ಕೋಟಿಗೆ ಸರ್ಕಾರ ಸಂಪುಟದಲ್ಲಿ ಅನುಮೋದನೆ ನೀಡಿದೆ. ಜಾತಿ ಆಧಾರಿತ ಗಣತಿ ಪ್ರಕ್ರಿಯೆಯು 7 ಜನವರಿ 2023 ರಿಂದ ಪ್ರಾರಂಭವಾಯಿತು. ಎರಡನೇ ಹಂತದ ಕಾಮಗಾರಿ ಏಪ್ರಿಲ್ 15ರಿಂದ ಆರಂಭವಾಗಿದೆ. ಮೇ 15ರೊಳಗೆ ಪೂರ್ಣಗೊಳ್ಳಬೇಕಿತ್ತು.