ನವದೆಹಲಿ:ದಿಲ್ಲಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದೆ. 3 ಬಾರಿ ವಿಫಲಗೊಂಡು ಕೊನೆಗೆ ಸುಪ್ರೀಂಕೋರ್ಟ್ ಸೂಚನೆಗೆ ಮೇರೆಗೆ ಇಂದು ಮೇಯರ್ ಆಯ್ಕೆಗೆ ಸಮಯ ನಿಗದಿ ಮಾಡಲಾಗಿದೆ. ಆಡಳಿತಾರೂಢ ಎಎಪಿಯ ಸದಸ್ಯರೇ ಎಂಸಿಡಿಗೆ ಮೊದಲ ಮುಖ್ಯಸ್ಥರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಪ್ರತಿಪಕ್ಷ ಬಿಜೆಪಿ ಕೂಡ ತನ್ನ ಸದಸ್ಯನನ್ನು ಮೇಯರ್ ಸ್ಥಾನಕ್ಕೆ ಚುನಾಯಿಸಲು ರಣತಂತ್ರ ಹೂಡಿದೆ.
ಮೇಯರ್ ಆಯ್ಕೆಯ ಜೊತೆಗೆ ಉಪಮೇಯರ್ ಮತ್ತು ಸ್ಥಾಯಿ ಸಮಿತಿಯ 6 ಸದಸ್ಯರ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಪಾಲಿಕೆಯ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ಕಳೆದ ವಾರ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಸುಪ್ರೀಂ ಕೋರ್ಟ್ ಆದೇಶದ ನಂತರ ಮೇಯರ್ ಚುನಾವಣೆ ನಡೆಸಲು ಪಾಲಿಕೆ ಸಭೆಯನ್ನು ಕರೆಯಲು ಒಪ್ಪಿಗೆ ನೀಡಿದರು.
ಮೇಯರ್, ಉಪಮೇಯರ್ ಮತ್ತು ಸ್ಥಾಯಿ ಸಮಿತಿಯ ಸದಸ್ಯರ ಚುನಾವಣೆಯ ದಿನಾಂಕವನ್ನು ನಿಗದಿಪಡಿಸಲು ಫೆ.17 ರೊಳಗೆ ಸಭೆ ಕರೆದು ನಿರ್ಧರಿಸಲು ಸುಪ್ರೀಂ ಕೋರ್ಟ್ ಸೂಚಿಸಿತು. ಈ ಪ್ರಕ್ರಿಯೆಗಾಗಿ 24 ಗಂಟೆಗಳ ಒಳಗೆ ಎಲ್ಲರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತ್ತು.
ಆಮ್ ಆದ್ಮಿ ಪಕ್ಷದ (ಎಎಪಿ) ಮೇಯರ್ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಅವರು ಚುನಾವಣೆಯನ್ನು ಶೀಘ್ರವಾಗಿ ನಡೆಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಆಲಿಸಿದ ನಂತರ ನ್ಯಾಯಾಲಯ ಈ ಆದೇಶ ನೀಡಿತ್ತು. ಅಲ್ಲದೇ, ಎಎಪಿ ಆಕ್ಷೇಪಿಸಿದ್ದ ದಿಲ್ಲಿ ಪಾಲಿಕೆಗೆ ನಾಮನಿರ್ದೇಶನಗೊಂಡ ಸದಸ್ಯರು ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಎಂಬ ವಾದವನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿ, ಅವರ ಚುನಾವಣೆಯಲ್ಲಿ ಮತ ಹಾಕಲು ಅರ್ಹರಲ್ಲ ಎಂದು ಹೇಳಿತ್ತು. ಲೆಫ್ಟಿನೆಂಟ್ ಗವರ್ನರ್ ಮೂಲಕ ಅವರು ಎಂಸಿಡಿಗೆ ನಾಮನಿರ್ದೇಶನಗೊಂಡಿದ್ದರು.
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಡಿಎಂಸಿ) ಕಾಯ್ದೆ, 1957 ರ ಪ್ರಕಾರ, ಚುನಾವಣೆಯ ನಂತರ ಮೊದಲ ಅಧಿವೇಶನದಲ್ಲಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯಾಗಬೇಕು. ಆದರೆ, ಕಳೆದ ವರ್ಷ ಡಿಸೆಂಬರ್ 4 ರಂದು ಚುನಾವಣೆ ನಡೆದು ಎರಡು ತಿಂಗಳು ಕರೆದರೂ ಮೇಯರ್ ಆಯ್ಕೆ ನಡೆದಿಲ್ಲ. ಜನವರಿ 6 ರಂದು ಪಾಲಿಕೆ ಚುನಾಯಿತ ಸದಸ್ಯರು ಮೊದಲ ಬಾರಿಗೆ ಸಭೆ ಸೇರಿದ್ದರು. ಬಿಜೆಪಿ ಮತ್ತು ಎಎಪಿ ಸದಸ್ಯರ ನಡುವಿನ ವಾಗ್ವಾದದ ನಂತರ ಸಭೆಯನ್ನು ಮುಂದೂಡಲಾಗಿತ್ತು.
ಜನವರಿ 24 ಮತ್ತು ಫೆಬ್ರವರಿ 6 ರಂದು ನಡೆದ ಎರಡನೇ ಮತ್ತು ಮೂರನೇ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ಗೊಂದಲ ಉಂಟಾಗಿ ನಿರ್ಣಯಕ್ಕೆ ಬರಲು ವಿಫಲವಾಗಿದ್ದವು. ಮೇಯರ್ ಆಯ್ಕೆ ನಡೆಯದೇ ಸಭೆ ಮುಂದೂಡಲ್ಪಟ್ಟಿತು. ಈ ಬಿಕ್ಕಟ್ಟು ವಾರ್ಷಿಕ ಬಜೆಟ್ ಪ್ರಕ್ರಿಯೆಗಳ ಮೇಲೂ ಪರಿಣಾಮ ಬೀರಿತು. ಇದರಿಂದಾಗಿ 2023- 24ರ ತೆರಿಗೆಗಳ ಪಟ್ಟಿಯನ್ನು ಫೆಬ್ರವರಿ 15 ರಂದು ಎಂಸಿಡಿಯ ವಿಶೇಷಾಧಿಕಾರಿಯೇ ಅಂಗೀಕರಿಸಿದರು. ನಿಯಮಗಳ ಪ್ರಕಾರ ತೆರಿಗೆಗಳ ವೇಳಾಪಟ್ಟಿಯನ್ನು ಫೆಬ್ರವರಿ 15 ರ ಮೊದಲು ಅಂಗೀಕರಿಸಬೇಕು. ಉಳಿದ ಬಜೆಟ್ ಭಾಗವನ್ನು ಮಾರ್ಚ್ 31 ರ ಒಳಗೆ ಸದನವು ಅಂಗೀಕರಿಸುವ ನಿರೀಕ್ಷೆಯಿದೆ.
ಸುಪ್ರೀಂ ಮೆಟ್ಟಿಲೇರಿದ್ದ ಮೇಯರ್ ಬಿಕ್ಕಟ್ಟು:ನಾಮನಿರ್ದೇಶನವಾದ ಸದಸ್ಯರು ಮೇಯರ್ ಚುನಾವಣೆಯಲ್ಲಿ ಮತ ಚಲಾವಣೆಗೆ ಬಿಜೆಪಿ ಪಟ್ಟು ಹಿಡಿದಿದ್ದರಿಂದ ಬಿಕ್ಕಟ್ಟು ಉಂಟಾಗಿತ್ತು. ಇದರಿಂದ ಆಪ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಲೆಫ್ಟಿನೆಂಟ್ ಗವರ್ನರ್ ನೇಮಕ ಮಾಡಿದ ಸದಸ್ಯರಿಗೆ ಚುನಾಯಿತ ಸದಸ್ಯರ ಜೊತೆ ಮತ ಹಾಕುವ ಹಕ್ಕು ಇಲ್ಲ ಎಂದು ಎಎಪಿ ವಾದಿಸಿತ್ತು. ಅದನ್ನು ಸುಪ್ರೀಂ ಕೂಡ ಒಪ್ಪಿದೆ.
ಎಎಪಿಯ ಒಬೆರಾಯ್ ಅವರು ಫೆಬ್ರವರಿ 7 ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿ, ನಾಮಿನಿ ಸದಸ್ಯರ ಮತವನ್ನು ರದ್ದುಗೊಳಿಸಿತು. ಅಲ್ಲದೇ ಶೀಘ್ರವೇ ಮೇಯರ್ ಆಯ್ಕೆಯನ್ನು ನಡೆಸಬೇಕು ಎಂದು ನಿರ್ದೇಶಿಸಿತು.
ಇನ್ನು ಕಳೆದ ವರ್ಷ ಡಿಸೆಂಬರ್ 4 ರಂದು ನಡೆದ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ್ದ ಎಎಪಿ ಸ್ಪಷ್ಟ ಬಹುಮತ ಪಡೆದಿತ್ತು. 250 ಸದಸ್ಯ ಸ್ಥಾನಗಳ ಪೈಕಿ 134 ವಾರ್ಡ್‌ಗಳನ್ನು ಗೆದ್ದು ಇತಿಹಾಸ ರಚಿಸಿದೆ. ದಿಲ್ಲಿ ಪಾಲಿಕೆ ಗದ್ದುಗೆಯ ಮೇಲೆ 15 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಬಿಜೆಪಿ ಆಡಳಿವನ್ನು ಇದು ಕೊನೆಗೊಳಿಸಿತು. ಬಿಜೆಪಿ 104 ವಾರ್ಡ್‌ಗಳನ್ನು ಗೆದ್ದು ಎರಡನೇ ಸ್ಥಾನ ಗಳಿಸಿದೆ. ಕಾಂಗ್ರೆಸ್ ಒಂಬತ್ತು ಸ್ಥಾನಗಳನ್ನು ಮಾತ್ರ ಪಡೆದಿದೆ. ಮೇಯರ್ ಆಯ್ಕೆಗಾಗಿ 250 ಚುನಾಯಿತ ಕೌನ್ಸಿಲರ್‌ಗಳು, 7 ಲೋಕಸಭೆ ಮತ್ತು ದೆಹಲಿಯ 3 ರಾಜ್ಯಸಭಾ ಸಂಸದರು ಮತ್ತು 14 ಶಾಸಕರು ಮತ ಚಲಾಯಿಸಲಿದ್ದಾರೆ.
ಓದಿ:ಎಂಸಿಡಿ ಚುನಾವಣೆ ಸೋಲು: ದೆಹಲಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆದೇಶ್ ಗುಪ್ತಾ ರಾಜೀನಾಮೆ