ಶ್ರೀ ಗಂಗಾನಗರ (ರಾಜಸ್ಥಾನ): ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಇಂದು ಮಿಜೋರಾಂ ಮತ್ತು ಛತ್ತೀಸ್ಗಡದಲ್ಲಿ ಚುನಾವಣೆ ನಡೆಯುತ್ತಿದೆ. ರಾಜಸ್ಥಾನದಲ್ಲೂ ಚುನಾವಣಾ ಕಣ ರಂಗೇರಿದೆ. ಸೋಮವಾರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿತ್ತು. ರಾಜಸ್ಥಾನದಲ್ಲಿ ನವೆಂಬರ್ 25 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಮತ ಎಣಿಕೆ ಜರುಗಲಿದೆ.
ಪ್ರತಿ ಬಾರಿ ಚುನಾವಣೆ ನಡೆದಾಗಲೂ ಹಲವು ಅಭ್ಯರ್ಥಿಗಳು ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಾಗಿ ನಾಮಪತ್ರ ಸಲ್ಲಿಸುತ್ತಾರೆ. ಒಂದೆರಡು ಬಾರಿ ಕೆಲ ಕಚ್ಚಿದರೆ, ಈ ಚುನಾವಣೆ ಮತ್ತು ರಾಜಕಾರಣದ ಸಹವಾಸವೇ ಬೇಡ ಅಂತಾ ಹಿಂದೆ ಸರಿಯುತ್ತಾರೆ. ಆದ್ರೆ ರಾಜಸ್ಥಾನದ ಶ್ರೀಕರಣಪುರ ವಿಧಾನಸಭಾ ಕ್ಷೇತ್ರದ ವ್ಯಕ್ತಿಯೊಬ್ಬರು ಬರೋಬ್ಬರಿ 32 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಇದೀಗ 33ನೇ ಬಾರಿಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.
32 ಬಾರಿ ಸೋತರೂ 33 ನೇ ಬಾರಿ ಸ್ಪರ್ಧೆ :ಶ್ರೀಕರಣಪುರ ವಿಧಾನಸಭಾ ಕ್ಷೇತ್ರದ 25 ಎಫ್ ಗ್ರಾಮದ ನಿವಾಸಿಯಾಗಿರುವ 78 ವರ್ಷದ ತೀತರ್ ಸಿಂಗ್ ಅವರು ಇದೀಗ ಮತ್ತೆ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದಾರೆ. ತೀತರ್ ಸಿಂಗ್ ಅವರು ಮೂವರು ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳು ಸೇರಿ ಐವರು ಮಕ್ಕಳನ್ನು ಹೊಂದಿದ್ದಾರೆ. ಎಲ್ಲರಿಗೂ ಮದುವೆಯಾಗಿದೆ. ಜೊತೆಗೆ ಕೆಲ ಮೊಮ್ಮಕ್ಕಳಿಗೂ ಮದುವೆಯಾಗಿದೆ. 1970ರಿಂದ ತೀತರ್ ಸಿಂಗ್ ಅವರು ಶ್ರೀಕರಣಪುರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾ ಬಂದಿದ್ದಾರೆ. ದಲಿತ ಸಮುದಾಯದವರಾದ ತೀತರ್ ಸಿಂಗ್ ಒಟ್ಟು 32 ಬಾರಿ ವಿವಿಧ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ಈ ಚುನಾವಣೆಗಳಲ್ಲಿ ಹಲವು ಬಾರಿ ಸೋತರೂ ಎದೆಗುಂದದೇ ಮತ್ತೆ ಚುನಾವಣೆಗೆ ನಿಲ್ಲುತ್ತಾರೆ.
ತೀತರ್ ಸಿಂಗ್ ಅವರು ತಾವು ಸ್ಪರ್ಧಿಸಿರುವ ಚುನಾವಣೆಗಳಲ್ಲಿ ಸುಮಾರು 20ಕ್ಕೂ ಅಧಿಕ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ. ಇದುವರೆಗೆ ತೀತರ್ ಅವರು 10 ವಿಧಾನಸಭೆ ಚುನಾವಣೆ, 10 ಲೋಕಸಭೆ ಚುನಾವಣೆ, ತಲಾ 4 ಬಾರಿ ಜಿಲ್ಲಾ ಪಂಚಾಯತ್, ಸರಪಂಚ್, ವಾರ್ಡ್ ಚುನಾವಣೆಗಳಲ್ಲೂ ಸ್ಪರ್ಧೆ ಮಾಡಿದ್ದಾರೆ.