ವಿಲ್ಲುಪುರಂ (ತಮಿಳುನಾಡು):ವಿಲ್ಲುಪುರಂ ಜಿಲ್ಲೆಯ ಮರಕ್ಕನಂ ಬಳಿಯ ಎಕ್ಕಿಯಾರ್ಕುಪ್ಪಂನ ಆರು ಜನರು ಭಾನುವಾರ ಸಾವನ್ನಪ್ಪಿದ್ದಾರೆ. ಚೆಂಗಲ್ಪಟ್ಟು ಜಿಲ್ಲೆಯ ಮಧುರಾಂತಗಮ್‌ನಲ್ಲಿ ಶುಕ್ರವಾರ ಇಬ್ಬರು ವ್ಯಕ್ತಿಗಳು ಮತ್ತು ಭಾನುವಾರ ದಂಪತಿ ಸಾವನ್ನಪ್ಪಿದ್ದಾರೆ. ಈ ಎಲ್ಲವೂ ಸಾವುಗಳು ನಕಲಿ(ಕಳಬಟ್ಟಿ) ಮದ್ಯ ಸೇವನೆಯಿಂದ ಉಂಟಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಹಲವು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ತಿಳಿದಿದೆ.
ಐಜಿ ಎನ್.ಕಣ್ಣನ್ ಮಾಹಿತಿ:''ಎಥೆನಾಲ್ ಹಾಗೂ ಮೆಥೆನಾಲ್ ಮಿಶ್ರಿತ ನಕಲಿ ಮದ್ಯವನ್ನು ಸೇವಿಸಿ 10 ಮಂದಿ ಮೃಪಟ್ಟಿದ್ದಾರೆ. ಈ ಪ್ರಕರಣದ ಹಿನ್ನೆಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು'' ಎಂದು ಪೊಲೀಸ್ ಮಹಾನಿರ್ದೇಶಕ (ಉತ್ತರ) ಎನ್.ಕಣ್ಣನ್ ಹೇಳಿದರು. "ತಮಿಳುನಾಡಿನ ಉತ್ತರ ವಲಯದಲ್ಲಿ ನಕಲಿ ಮದ್ಯದ ಸಾವಿನ ಎರಡು ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಈ ಎರಡು ಘಟನೆಗಳ ನಡುವಿನ ಸಂಬಂಧದ ಬಗ್ಗೆ ಯಾವುದೇ ಪುರಾವೆಗಳು ಪೊಲೀಸರಿಗೆ ಲಭಿಸಿಲ್ಲ.
ಆದರೆ, ಯಾವುದೇ ಪುರಾವೆಗಳನ್ನು ಕಂಡುಹಿಡಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಎರಡೂ ಪ್ರಕರಣಗಳಿಗೆ ನಕಲಿ ಮದ್ಯದ ಸೇವನೆಯಲ್ಲಿಯೇ ಪ್ರಮುಖ ಕಾರಣ. ಒಂದು ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಮತ್ತು ಇನ್ನೊಂದು ವಿಲ್ಲುಪುರಂ ಜಿಲ್ಲೆಯಲ್ಲಿ. ಮರಕ್ಕನಂ ಬಳಿಯ ವಿಲ್ಲುಪುರಂ ಜಿಲ್ಲೆಯ ಎಕ್ಕಿಯಾರ್ಕುಪ್ಪಂ ಗ್ರಾಮದಲ್ಲಿ ನಿನ್ನೆ ಆರು ಮಂದಿ ವಾಂತಿ, ಕಣ್ಣಿನ ಉರಿ, ವಾಂತಿ ಮತ್ತು ತಲೆ ತಿರುಗುವಿಕೆ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಮಾಹಿತಿ ಮೇರೆಗೆ ಗ್ರಾಮಕ್ಕೆ ಆಗಮಿಸಿದ ಪೊಲೀಸ್ ತಂಡ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದೆ. ಇದರಲ್ಲಿ ನಾಲ್ವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದು, ಇಬ್ಬರು ತೀವ್ರ ನಿಗಾ ಘಟಕದಲ್ಲಿದ್ದಾರೆ. 33 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಐಜಿ ಎನ್.ಕಣ್ಣನ್ ಭಾನುವಾರ ವಿಲ್ಲುಪುರಂನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಮಧ್ಯೆ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಇನ್ನೂ ಇಬ್ಬರು ಸಾವನ್ನಪ್ಪಿದ್ದಾರೆ. ವಿಲ್ಲುಪುರಂ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಆರಕ್ಕೆ ಮತ್ತು ಒಟ್ಟಾರೆ ಸಾವಿನ ಸಂಖ್ಯೆ ಹತ್ತಕ್ಕೆ ತಲುಪಿದೆ. ಘಟನೆಗೆ ಸಂಬಂಧಿಸಿದಂತೆ, ಅಮರನ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ನಕಲಿ ಮದ್ಯವನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ. ಅದರಲ್ಲಿ ಮೆಥೆನಾಲ್ ಇರುವುದನ್ನು ಖಚಿತಪಡಿಸಿಕೊಳ್ಳಲು ಅದನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ಐಜಿ ತಿಳಿಸಿದ್ದಾರೆ.
ಚೆಂಗಲ್ಪಟ್ಟು ಜಿಲ್ಲೆಯಲ್ಲಿ ನಾಲ್ವರು ಸಾವು:ಚೆಂಗಲ್ಪಟ್ಟು ಜಿಲ್ಲೆಯಲ್ಲಿ 4 ಜನರು ಸಾವನ್ನಪ್ಪಿದ ಎರಡನೇ ಘಟನೆಯ ಬಗ್ಗೆ ಐಜಿ ಎನ್ ಕಣ್ಣನ್ ಮಾಹಿತಿ ನೀಡಿದರು. "ಬೆಳಿಗ್ಗೆ ಚೆಂಗಲ್ಪಟ್ಟು ಜಿಲ್ಲೆಯ ಚಿತ್ತಮೂರಿನಲ್ಲಿ ಒಂದು ಕುಟುಂಬದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ ಪ್ರಕರಣ ವರದಿಯಾಗಿದೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಆರಂಭದಲ್ಲಿ, ನಾವು ಕೌಟುಂಬಿಕ ಕಲಹದಿಂದ ಇದು ಆತ್ಮಹತ್ಯೆ ಯತ್ನ ಎಂದು ಭಾವಿಸಿದ್ದೇವೆ. ಆದರೆ, ಅವರ ರೋಗಲಕ್ಷಣದ ಹಿನ್ನೆಲೆಯಲ್ಲಿ ನಾವು ಅದನ್ನು ನಕಲಿ ಮದ್ಯದ ಘಟನೆ ಎಂದು ಶಂಕಿಸಿದ್ದೇವೆ. ಇದರಿಂದ ಪ್ರದೇಶದಲ್ಲಿ ಎಚ್ಚರಿಕೆಯನ್ನು ಮೂಡಿಸಲಾಯಿತು. ನಂತರ ಇದೇ ರೋಗಲಕ್ಷಣಗಳೊಂದಿಗೆ ಇನ್ನೂ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಒಟ್ಟು ನಾಲ್ವರು ಸಾವನ್ನಪ್ಪಿದ್ದು, ಐದನೆಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶವಪರೀಕ್ಷೆ ನಡೆಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಅಮ್ಮಾವಸಾಯಿ ಎಂಬ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎನ್ ಕಣ್ಣನ್ ತಿಳಿಸಿದ್ದಾರೆ.
7 ಠಾಣಾಧಿಕಾರಿಗಳ ಅಮಾನತು:"ಪೊಲೀಸರು ಪ್ರಾಥಮಿಕ ತನಿಖೆಯನ್ನು ಸಹ ಉಲ್ಲೇಖಿಸಿದ್ದಾರೆ. ಈ ಎಲ್ಲರ ಸಾವಿಗೆ ಕಾರಣವೇನೆಂದ್ರೆ, ಎಥೆನಾಲ್ ಮತ್ತು ಮೆಥೆನಾಲ್ ಮಿಶ್ರಿತ ಪದಾರ್ಥಗಳಿರುವ ನಕಲಿ ಮದ್ಯವನ್ನು ಸೇವಿಸಿರಬಹುದು ಎಂದು ತಿಳಿದಿದೆ. ಈ ಎರಡೂ ಪ್ರಕರಣಗಳಲ್ಲಿ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಹಾಗೂ ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ವಿಲ್ಲುಪುರಂ ಮರಕ್ಕನಂನಲ್ಲಿ ಇಬ್ಬರು ಇನ್ಸ್ಪೆಕ್ಟರ್ಗಳು ಮತ್ತು ಇಬ್ಬರು ಸಬ್ಇನಸ್ಪೆಕ್ಟರ್ಗಳನ್ನು ಅಮಾನತು ಮಾಡಲಾಗಿದೆ. ಜೊತೆಗೆ ಚೆಂಗಲ್ಪಟ್ಟು ಘಟನೆಗೆ ಸಂಬಂಧಿಸಿದಂತೆ, ಒಬ್ಬ ಇನ್ಸ್ಪೆಕ್ಟರ್ ಮತ್ತು ಇಬ್ಬರು ಸಬ್ ಇನ್ಸ್ಪೆಕ್ಟರ್ಗಳನ್ನು ಅಮಾನತುಗೊಳಿಸಲಾಗಿದೆ" ಎಂದು ಐಜಿ ತಿಳಿಸಿದರು.
ಇದನ್ನೂ ಓದಿ:ಗುರುದ್ವಾರ ಸಂಕೀರ್ಣದಲ್ಲಿ ಮಹಿಳೆಗೆ ಗುಂಡಿಕ್ಕಿ ಹತ್ಯೆ..!