ಅಯೋಧ್ಯಾ: ಉತ್ತರ ಪ್ರದೇಶದ ಗೋಸಾಯಿಗಂಜ್ ವಿಧಾನಸಭಾ ಕ್ಷೇತ್ರದ ಕಬೀರ್‌ಪುರ ಗ್ರಾಮದಲ್ಲಿ ಶುಕ್ರವಾರ ಸಮಾಜವಾದಿ ಮತ್ತು ಬಿಜೆಪಿ ಪಕ್ಷದ ಬೆಂಬಲಿಗರ ನಡುವೆ ತೂರಾಟ ಮತ್ತು ಗುಂಡಿನ ಚಕಮಕಿ ನಡೆದಿರುವ ವಿಷಯ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಹಾರಾಜಗಂಜ್ ಠಾಣೆಗೆ ಆಗಮಿಸಿದ ಎಸ್‌ಪಿ ಬೆಂಬಲಿಗರು ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಾಹಿತಿ ಪ್ರಕಾರ, ಪೊಲೀಸ್ ಠಾಣೆಗೆ ಆಗಮಿಸಿದ ಎರಡೂ ಪಕ್ಷದ ಬೆಂಬಲಿಗರು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ವೇಳೆ, ಎಸ್‌ಪಿ ಬೆಂಬಲಿಗರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ನಂತರ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಠಾಣೆ ಹೊರಗೆ ನೆರೆದಿದ್ದ ಜನರನ್ನು ಚದುರಿಸಿದ್ದಾರೆ.
ಎಸ್‌ಪಿ-ಬಿಜೆಪಿ ಬೆಂಬಲಿಗರ ನಡುವೆ ಗುಂಡಿನ ಚಕಮಕಿ, ಕಲ್ಲು ತೂರಾಟ ಅಯೋಧ್ಯೆಯ ಗೋಸೈಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಪ್ರಬಲ ನಾಯಕರು ಮುಖಾಮುಖಿಯಾಗಿದ್ದಾರೆ. ಮಾಜಿ ಶಾಸಕರಾದ ಅಭಯ್ ಸಿಂಗ್ ಗೋಸೈಗಂಜ್ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದರೆ, ಜೈಲು ಸೇರಿರುವ ಮಾಜಿ ಶಾಸಕ ಇಂದರ್ ಪ್ರತಾಪ್ ತಿವಾರಿ ಖಬ್ಬು ಅವರ ಪತ್ನಿ ಆರತಿ ತಿವಾರಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಎರಡೂ ಅಭ್ಯರ್ಥಿಗಳ ಬೆಂಬಲಿಗರಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪರಿಣಾಮ ಕಲ್ಲು ತೂರಾಟ, ಗುಂಡಿನ ದಾಳಿಗೆ ಕಾರಣವಾಗಿದೆ ಎನ್ನಲಾಗಿದೆ.
ಈ ಕುರಿತು ಎಸ್‌ಎಸ್‌ಪಿ ಶೈಲೇಶ್ ಪಾಂಡೆ ಮಾತನಾಡಿ, ಎರಡೂ ಪಕ್ಷಗಳ ಅಭ್ಯರ್ಥಿಗಳು ಪರಸ್ಪರ ಕಲ್ಲು ತೂರಾಟ, ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆಯಿಂದ ಯಾವುದೇ ವ್ಯಕ್ತಿ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಾರಿ ತಪ್ಪಿಸುವ ವಿಷಯಗಳು ಹರಿದಾಡುತ್ತಿವೆ. ಕೆಲವು ವಾಹನಗಳು ಜಖಂಗೊಂಡಿರುವುದು ಕಂಡು ಬಂದಿದ್ದು, ಪರಸ್ಪರ ಆರೋಪ - ಪ್ರತ್ಯಾರೋಪಕ್ಕೆ ಸಂಚು ರೂಪಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.