ಅಮರಾವತಿ (ಆಂಧ್ರ ಪ್ರದೇಶ): ಬಿಡುವಿನ ವೇಳೆಯಲ್ಲಿ ಮನೆಯಿಂದಲೇ ಪಾರ್ಟ್ ಟೈಮ್ ಕೆಲಸ ಮಾಡಿ ಸಾಕಷ್ಟು ಹಣ ಸಂಪಾದಿಸುವ ಅವಕಾಶವಿದೆ ಎನ್ನುವ ಅನೇಕ ಜಾಹೀರಾತುಗಳನ್ನು ನಾವು ದಿನನಿತ್ಯ ನೋಡುತ್ತಿರುತ್ತೇವೆ. ಹೀಗೆ ಉದ್ಯೋಗ ನೀಡುತ್ತೇವೆ ಎನ್ನುವ ಹಲವು ಜಾಹೀರಾತುಗಳನ್ನು ನಿಜವೆಂದು ನಂಬಿ ಅನೇಕ ಖಾಸಗಿ ಉದ್ಯೋಗಿಗಳು ಮತ್ತು ನಿರುದ್ಯೋಗಿಗಳು ವಂಚಕರ ಬಲೆಗೆ ಬೀಳುತ್ತಿದ್ದಾರೆ. ಇದೀಗ ವಿಜಯವಾಡ ನಗರದ ಸಾಫ್ಟ್‌ವೇರ್ ಇಂಜಿನಿಯರ್ವೊಬ್ಬರು ಜಾಹೀರಾತು ನಂಬಿ ಅಪಾರ ಪ್ರಮಾಣದ ಹಣ ಕಳೆದುಕೊಂಡಿದ್ದಾರೆ.
ವಿಜಯವಾಡ ನಗರದ ಯುವತಿಯೊಬ್ಬರು ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಆಕೆಯ ಮೊಬೈಲ್‌ಗೆ ಕಿರು ಸಂದೇಶವೊಂದು ಬಂದಿತ್ತು. "ನೀವು ಅರೆಕಾಲಿಕ ಕೆಲಸ ಮಾಡಿ ಸಾಕಷ್ಟು ಹಣ ಗಳಿಸಬಹುದು. ಈ ಕುರಿತಾದ ಹೆಚ್ಚಿನ ಮಾಹಿತಿ ಪಡೆಯಲು ಕೆಳಗಿನ ಫೋನ್ ಸಂಖ್ಯೆಗೆ ಕರೆ ಮಾಡಿ ವಿವರಗಳಿಗಾಗಿ ನಮ್ಮನ್ನು ಸಂಪರ್ಕಿಸಿ" ಎಂದು ತಿಳಿಸಲಾಗಿತ್ತು.
ಇದನ್ನೂ ಓದಿ :ರಾಜಕೀಯ ನಾಯಕರ ಹೆಸರು ಹೇಳಿ ಚಿನ್ನ ಹಾಗೂ ಹಣ ಪಡೆದು ವಂಚಿಸಿದ ಆರೋಪಿಗಳು: ಆರೋಪಿ ಬಂಧಿಸಿದ ಸಿಸಿಬಿ ಪೊಲೀಸರು
ಯುವತಿ ಆ ನಂಬರ್‌ಗೆ ಕರೆ ಮಾಡಿದಾಗ, ಯೂಟ್ಯೂಬ್‌ನಲ್ಲಿನ ವಿಡಿಯೋಗಳನ್ನು ಲೈಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವುದಾಗಿ ವಂಚಕರು ತಿಳಿಸಿದ್ದಾರೆ. ಇದನ್ನೇ ಸತ್ಯವೆಂದು ನಂಬಿದ ಆಕೆ, ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿದ್ದಾಳೆ. ಬಳಿಕ ಮೂರು ವಿಡಿಯೋಗಳನ್ನು ಲೈಕ್ ಮಾಡಿದ್ದಕ್ಕೆ ಆಕೆಯ ಖಾತೆಗೆ 150 ರೂ. ಹಾಕಲಾಗಿದ್ದು, ಆರು ವಿಡಿಯೋಗಳನ್ನು ಲೈಕ್ ಮಾಡಿದಾಗ 300 ರೂ. ಜಮೆ ಆಗಿದೆ. ಇದನ್ನು ಸತ್ಯವೆಂದುಕೊಂಡ ಯುವತಿಗೆ ನೀವು ಪ್ರಿಪೇಯ್ಡ್ ಮಾಡಿದರೆ ಕೆಲಸ ಖಾಯಂ ಆಗುತ್ತದೆ ಎಂದು ವಂಚಕರು ನಂಬಿಸಿದ್ದಾರೆ. ಜೊತೆಗೆ, ಇದೊಂದು ಹೂಡಿಕೆಯಾಗಿದ್ದು, ಹೆಚ್ಚು ಲಾಭ ತಂದುಕೊಡುತ್ತದೆ ಎಂದಿ ಹೇಳಿದ್ದಾರೆ. ತಕ್ಷಣವೇ ಆಕೆ 1,000 ರೂ.ಗಳನ್ನು ಪಾವತಿಸಿದ್ದು, ಬಳಿಕ ಆಕೆಗೆ 1,600 ರೂ. ಬಂದಿದೆ. ನಂತರ ವಂಚಕರ ಬ್ಯಾಂಕ್ ಖಾತೆಗೆ ಕಂತುಗಳಲ್ಲಿ 19 ಲಕ್ಷ ರೂ. ಪಾವತಿಸಿದ್ದು, ಹಣ ವಾಪಸ್ ಬಾರದೇ ಇದ್ದಾಗ ಮೋಸ ಹೋಗಿರುವುದು ತಿಳಿದುಬಂದಿದೆ.
ಇದನ್ನೂ ಓದಿ :ಸಾರ್ವಜನಿಕರ ತೆರಿಗೆ ಹಣ ವಂಚನೆ ಆರೋಪ: ಪೂರ್ವ ವಲಯದ ಆರೋಗ್ಯಾಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ
ಬಳಿಕ, ಮತ್ತೆ ವಂಚಕರು ಯುವತಿಗೆ ಕರೆ ಮಾಡಿ 12,95,000 ರೂ.ಗಳನ್ನು ನೀಡುವಂತೆ ಒತ್ತಡ ಹೇರಿದ್ದಾರೆ. ಹಣ ಕೊಡದಿದ್ದರೆ ನೀವು ಮೊದಲು ನೀಡಿದ ಹಣ ವಾಪಸ್ ಬರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಈಗಾಗಲೇ 19 ಲಕ್ಷ ರೂ. ಪಾವತಿಸಿ ವಂಚನೆಗೊಳಗಾಗಿದ್ದ ಯುವತಿ ಮತ್ತೆ ಪಾವತಿಸಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾಳೆ. ನಂತರ, ಪೊಲೀಸರನ್ನು ಭೇಟಿ ಮಾಡಿ, ಈ ಕುರಿತು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ :ಪ್ರತ್ಯೇಕ ವಂಚನೆ ಪ್ರಕರಣ: ದುಪ್ಪಟ್ಟು ಹಣ ಕೊಡುವುದಾಗಿ 18 ಲಕ್ಷ ರೂ. ಪಂಗನಾಮ