ಚಂಡೀಗಢ: ಭಾನುವಾರ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ನೇಮಕ ಮಾಡಲಾಗಿತ್ತು. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರೋಧದ ನಡುವೆಯೇ ಈ ನೇಮಕ ನಡೆದಿತ್ತು. ಇದೀಗ ಎಲ್ಲ ಧರ್ಮಗಳ ಮತದಾರರನ್ನು ಸೆಳೆಯಲು ಸಿಧು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ (ಪಿಪಿಸಿಸಿ) ಮುಖ್ಯಸ್ಥರಾಗಿ ನೇಮಕವಾದಾಗಿನಿಂದ ಸಿಧು ತಮ್ಮ ಪ್ರಭಾವವನ್ನು ಬಲಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಶಾಸಕರು ಮತ್ತು ಪಕ್ಷದ ಮುಖಂಡರನ್ನು ಭೇಟಿ ಮಾಡುತ್ತಿದ್ದಾರೆ. ಜೊತೆಗೆ ಎಲ್ಲ ಧರ್ಮಗಳ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ತೊಡಗಿದ್ದು, ಈ ಹಿನ್ನೆಲೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಔಪಚಾರಿಕವಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು 60 ಕ್ಕೂ ಹೆಚ್ಚು ಶಾಸಕರ ಜೊತೆ ಅಮೃತಸರದ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಸುವರ್ಣ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ಕುರಿತು ಎಲ್ಲ 77 ಕಾಂಗ್ರೆಸ್ ಶಾಸಕರನ್ನು ಸಿಧು ಆಹ್ವಾನಿಸಿದ್ದರು ಎನ್ನಲಾಗಿದೆ. ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಸಿಧು ಅವರೊಂದಿಗೆ ಪಿಪಿಸಿಸಿ ಮಾಜಿ ಅಧ್ಯಕ್ಷ ಸುನಿಲ್ ಜಖರ್, ಸಚಿವ ತ್ರಿಪಾತ್ ರಾಜಿಂದರ್ ಬಾಜ್ವಾ, ಶಾಸಕ ಇಂದರ್ಬೀರ್ ಸಿಂಗ್ ಬುಲೇರಿಯಾ, ಪಿರ್ಮಲ್ ಸಿಂಗ್, ಮದನ್ ಲಾಲ್ ಜಲಾಲ್ಪುರ್, ಹರ್ಜೋತ್ ಕಮಲ್, ಬೃಂದರ್ ಧಿಲ್ಲಾನ್ ಮತ್ತು ಅಮೃತಸರ ಮೇಯರ್ ರಿಂಟು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಈ ಹಿಂದೆ ಸಹ ಪಂಜಾಬ್ನಲ್ಲಿರುವ ಹಿಂದೂ ಮತದಾರರನ್ನು ಆಕರ್ಷಿಸಲು ಸಿಧು ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಸುವರ್ಣ ದೇವಾಲಯಕ್ಕೆ ಭೇಟಿ ನೀರುವುದು ಸಹ ಸಿಖ್ ಮತದಾರರನ್ನು ತಮ್ಮತ್ತ ಸೆಳೆಯುವುದಕ್ಕಾಗಿಯೇ ಎಂದು ವಿಶ್ಲೇಷಿಸಲಾಗುತ್ತಿದೆ.