ನವದೆಹಲಿ:ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಭಾರತೀಯ ಜನತಾ ಪಾರ್ಟಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಉಂಟಾಗಿದೆ. ಇದರ ಬೆನ್ನಲ್ಲೇ ಶಿವಸೇನೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಾವು ಸ್ಪರ್ಧೆ ಮಾಡಲ್ಲ ಎಂದಿರುವ ಶಿವಸೇನೆ, ನಿಜವಾದ ಬಂಗಾಳ ಟೈಗರ್ಗೆ ನಮ್ಮ ಬೆಂಬಲ ಎಂದಿದೆ.
ಟಿಎಂಸಿಗೆ ಬೆಂಬಲ ಘೋಷಿಸಿದ ಶಿವಸೇನೆ ಶಿವಸೇನೆ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಶಿವಸೇನೆ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸುವುದೇ ಅಥವಾ ಇಲ್ಲವೇ ಎಂಬ ಬಗ್ಗೆ ಹಲವರಿಗೆ ಕುತೂಹಲವಿತ್ತು. ಆದರೆ ಈ ಬಗ್ಗೆ ಪಕ್ಷದ ಮುಖಂಡ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಅಲ್ಲಿನ ಚುನಾವಣೆಯಲ್ಲಿ ನಾವು ಸ್ಪರ್ಧೆ ಮಾಡಲ್ಲ ಎಂದಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ಪಕ್ಷದ ಚಿಹ್ನೆಗಳೊಂದಿಗೆ ತಯಾರಾಗುತ್ತಿವೆ ಸಿಹಿತಿಂಡಿಗಳು
ಜತೆಗೆ ಈ ಸಲ 'ದೀದಿ ವರ್ಸಸ್ ಆಲ್ ಫೈಟ್' ಎಂದಿರುವ ಸಂಜಯ್ ರಾವುತ್, ಮುಂದಿನ ಚುನಾವಣೆಯಲ್ಲಿ ಮಮತಾ ಗೆಲುವು ಸಾಧಿಸುವಂತೆ ನಾವು ಪ್ರಾರ್ಥಿಸುತ್ತೇವೆ ಎಂದಿದ್ದಾರೆ. ಈಗಾಗಲೇ ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ಗೆ ಬೆಂಬಲ ನೀಡಿದೆ.
ಈ ಹಿಂದೆ ಶಿವಸೇನೆ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದೆ ಎಂದು ರಾವುತ್ ಹೇಳಿಕೆ ನೀಡಿದ್ದರು. ಆದರೆ ಇದೀಗ ಮಮತಾ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಬಿಜೆಪಿ ಮಣಿಸಲು ಯೋಜನೆ ರೂಪಿಸಿಕೊಂಡಿದೆ. ಪಶ್ಚಿಮ ಬಂಗಾಳದ 294 ಸ್ಥಾನಗಳಿಗೆ ಒಟ್ಟು 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಬಿಜೆಪಿ, ಟಿಎಂಸಿ ಅಬ್ಬರದ ಪ್ರಚಾರ ನಡೆಸುತ್ತಿವೆ.