ನವದೆಹಲಿ:ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ಅಭ್ಯರ್ಥಿಗಳಾಗಿ ಹಿರಿಯ ನಾಯಕ ಶಶಿ ತರೂರ್ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಇದರ ಮಧ್ಯೆ 7 ರಾಜ್ಯದ ಕಾಂಗ್ರೆಸ್ ಘಟಕ ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನವನ್ನು ನೀಡುವಂತೆ ಹೈಕಮಾಂಡ್ಗೆ ಪತ್ರ ಬರೆದಿವೆ.
1. ಸ್ಪರ್ಧಿಸಲ ಶಶಿ ತರೂರ್‌ಗೆ ಸೋನಿಯಾ ಒಪ್ಪಿಗೆ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದ್ದು, 19ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ. ಶಶಿ ತರೂರ್ ನಿನ್ನೆಯಷ್ಟೇ ಸೋನಿಯಾ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಪಕ್ಷದ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಲು ಹಸಿರು ನಿಶಾನೆ ನೀಡಿದ್ದಾರೆಂಬ ಮಾತು ಕೇಳಿ ಬರಲು ಶುರುವಾಗಿದೆ.
ಗಾಂಧಿ ಕುಟುಂಬದ ಬೆಂಬಲಿತ ಅಭ್ಯರ್ಥಿ ತಮ್ಮೆದುರು ಸ್ಪರ್ಧೆ ಮಾಡಿದ್ರೂ ಸಹ ತಾವು ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದಿರುವ ಶಶಿ ತರೂರ್, ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರೆ ಮಾತ್ರ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ ಎನ್ನಲಾಗ್ತಿದೆ.
2. ಅಶೋಕ್ ಗೆಹ್ಲೋಟ್‌ಗೆ ಅಧ್ಯಕ್ಷ ಸ್ಥಾನ ಸಿಗುವುದೇ?: ಗಾಂಧಿ ಕುಟುಂಬಕ್ಕೆ ನಿಷ್ಠಾವಂತನಾಗಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ಗಾಂಧಿ ಪರಿವಾರ ಮಣೆ ಹಾಕಲಿದೆ ಎಂಬ ಮಾತುಗಳನ್ನೂ ಅಲ್ಲಗಳೆಯುವಂತಿಲ್ಲ. ಮುಂದಿನ ಕೆಲ ದಿನಗಳಲ್ಲಿ ಅವರು ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆಂದು ಹೇಳಲಾಗ್ತಿದೆ.
3. ರಾಹುಲ್‌ಗೆ ಮತ್ತೆ ಅವಕಾಶ ನೀಡುವಂತೆ ಆಗ್ರಹ: ರಾಜಸ್ಥಾನ ಪ್ರದೇಶ ಕಾಂಗ್ರೆಸ್, ಛತ್ತೀಸ್ಗಢ, ತಮಿಳುನಾಡು, ಬಿಹಾರ,ಮಹಾರಾಷ್ಟ್ರ, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಕಾಂಗ್ರೆಸ್ ರಾಹುಲ್ ಗಾಂಧಿ ಅವರಿಗೆ ಮತ್ತೊಂದು ಅವಕಾಶ ನೀಡುವಂತೆ ಪತ್ರ ಬರೆದಿವೆ. ಸೆ. 24ರಿಂದ ಅಕ್ಟೋಬರ್ 2ರವರೆಗೆ ಕಾಂಗ್ರೆಸ್ ಅಧ್ಯಕ್ಷೀಯ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ ಸ್ಪರ್ಧೆ? ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯೆ
4. ಇಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ?: ಈ ಹಿಂದೆ 2017ರಲ್ಲಿ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋಲುಂಡಿದ್ದು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ, ಸೋನಿಯಾ ಗಾಂಧಿ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರೆಲ್ಲಾ ಕಣಕ್ಕಿಳಿಯಲಿದ್ದಾರೆಂಬ ಅಭ್ಯರ್ಥಿಗಳ ಪಟ್ಟಿಯನ್ನು ಕೈ ಪಕ್ಷ ಇಂದು ಪ್ರಕಟಿಸುವ ಸಾಧ್ಯತೆ ಇದೆ.