ನವದೆಹಲಿ:ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಕಾಂಗ್ರೆಸ್ ನಾಯಕ ಶಶಿ ತರೂರು ಎಐಸಿಸಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಬಳಿಕ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ನಾನು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ಈಗಷ್ಟೇ ನಾಮಪತ್ರ ಸಲ್ಲಿಸಿದ್ದೇನೆ. ಭಾರತದ ಏಕೈಕ ಪಕ್ಷಕ್ಕೆ ತನ್ನ ನಾಯಕನನ್ನು ಆಯ್ಕೆ ಮಾಡಲು ಮುಕ್ತ ಪ್ರಜಾಸತ್ತಾತ್ಮಕ ಪ್ರಕ್ರಿಯೆಯೊಂದಿಗೆ ಸೇವೆ ಸಲ್ಲಿಸುವುದು ಒಂದು ವಿಶೇಷವಾಗಿದೆ. ಸೋನಿಯಾ ಅವರ ಮಾರ್ಗದರ್ಶನ ಮತ್ತು ದೂರದೃಷ್ಟಿಯನ್ನು ಬಹಳವಾಗಿ ಪ್ರಶಂಸಿಸುತ್ತೇನೆ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಮಾತನಾಡಿದ ಕಾಂಗ್ರೆಸ್ ಸಂಸದ ಶಶಿ ತರೂರ್, ಕಣದಲ್ಲಿರುವ ಪಕ್ಷದ ನಾಯಕರಲ್ಲಿ ಯಾವುದೇ ಸ್ಪರ್ಧೆ ಇಲ್ಲ. ಇಲ್ಲಿ ಸೌಹಾರ್ದಯುತವಾದ ಸ್ಪರ್ಧೆ (ಫ್ರೆಂಡ್ಲಿ) ಮಾತ್ರ ಇದೆ ಎಂದು ಹೇಳಿದ್ದರು. ನಾವೆಲ್ಲರೂ ಒಂದೇ ಸಿದ್ಧಾಂತ, ಮೌಲ್ಯಗಳು ಮತ್ತು ಆದರ್ಶಗಳನ್ನು ಪಾಲಿಸುತ್ತೇವೆ. ಪಕ್ಷವನ್ನು ಬಲಪಡಿಸಬೇಕೆಂದು ನಾವು ಬಯಸುತ್ತೇವೆ. ಇದು ಸೌಹಾರ್ದ ಸ್ಪರ್ಧೆಯಾಗಿದೆ. ಇದರಲ್ಲಿ ಯಾವುದೇ ಪೈಪೋಟಿ ಇಲ್ಲ ಎಂದು ತರೂರ್ ಹೇಳಿದರು.