ಅಮಲಾಪುರಂ (ಆಂಧ್ರಪ್ರದೇಶ):ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ಮರು ನಾಮಕರಣ ಸಂಬಂಧ ಮಂಗಳವಾರ ನಡೆದ ಭಾರಿ ಹಿಂಸಾಚಾರದಲ್ಲಿ ಸಚಿವರು ಮತ್ತು ಶಾಸಕರ ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 46 ಜನ ಆರೋಪಿಗಳನ್ನು ಅಮಲಾಪುರಂ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಮುನ್ನೆಚ್ಚರಿಕೆ ಕ್ರಮವಾಗಿ 144ರಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಸಭೆ, ರ್‍ಯಾಲಿಗಳಿಗೆ ನಿರ್ಬಂಧ ಹೇರಲಾಗಿದೆ.
ಕೋನಸೀಮಾ ಜಿಲ್ಲೆಗೆ ಡಾ.ಬಿ.ಆರ್.ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡುವ ಬಗ್ಗೆ ಸರ್ಕಾರದ ಪ್ರಸ್ತಾವನೆ ಮುಂದಿಟ್ಟಿದೆ. ಇದನ್ನು ವಿರೋಧಿಸಿ ಕೋನಸೀಮಾ ಸಾಧನಾ ಸಮಿತಿ (ಕೆಎಸ್‌ಎಸ್) ಮಂಗಳವಾರ ಹಮ್ಮಿಕೊಂಡ ಪ್ರತಿಭಟನೆ ವೇಳೆ ಜಿಲ್ಲಾ ಕೇಂದ್ರವಾದ ಅಮಲಾಪುರದಲ್ಲಿ ಹಿಂಸಾಚಾರ ನಡೆದಿತ್ತು. ಇತ್ತ, ಸರ್ಕಾರ ಪ್ರಸ್ತಾವವನ್ನು ಬೆಂಬಲಿಸಿ ಇತರ ಗುಂಪುಗಳು ಪ್ರತಿಭಟನೆ ನಡೆಸಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆಸಿ ಭದ್ರತೆಗೆ ನಿಯೋಜಿಸಲಾಗಿದೆ.
ಮೊಬೈಲ್ ಸೇವೆ ಸ್ಥಗಿತ : ಹಿಂಸಾಚಾರ ಹತೋಟಿಗೆ ತರುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವ ಪೊಲೀಸರು, ಯಾವುದೇ ರೀತಿಯ ಪ್ರತಿಭಟನೆ ನಡೆಯದಂತೆ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಜೊತೆಗೆ ಪಟ್ಟಣಕ್ಕೆ ಬರುವ ಬಸ್‌ಗಳನ್ನೂ ರದ್ದುಗೊಳಿಸಲಾಗಿದೆ. ಮೊಬೈಲ್ ಫೋನ್ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ.
ಆರು ವಿವಿಧ ಕೇಸ್ಗಳು ದಾಖಲು : ಹಿಂಸಾಚಾರ ಸಂಬಂಧ ಪೊಲೀಸರು ಇದುವರೆಗೆ ಆರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ಹಿಂಸಾಚಾರದಲ್ಲಿ ಪಾಲ್ಗೊಂಡ 46 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೇ, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮಾಧ್ಯಮಗಳು ಹಾಗೂ ಪೊಲೀಸರ ವೀಡಿಯೊ ಚಿತ್ರೀಕರಣದ ಸಹಾಯದಿಂದ ಆರೋಪಿಗಳನ್ನು ಗುರುತಿಸುತ್ತಿದ್ದೇವೆ ಎಂದು ಡಿಐಜಿ ಪಾಲರಾಜು ತಿಳಿಸಿದ್ದಾರೆ.