ನವದೆಹಲಿ:2016ರಲ್ಲಿ ಹರಿದ್ವಾರದಲ್ಲಿ ಆಯೋಜನೆಗೊಂಡಿದ್ದ ಅರ್ಧ ಕುಂಭ ಮೇಳದಲ್ಲಿ ಬಾಂಬ್ ಸ್ಫೋಟಿಸಲು ಯೋಜನೆ ರೂಪಿಸಿದ್ದ ಐವರು ಆರೋಪಿಗಳಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ದೆಹಲಿಯ ಎನ್ಐಎ ಕೋರ್ಟ್ ಜೈಲು ಶಿಕ್ಷೆ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಪರ್ವೀನ್ ಸಿಂಗ್ ಅಪರಾಧಿಗಳಾಗಿರುವ ಅಖ್ಲಾಕುರ್ ರೆಹಮಾನ್, ಮೊಹಮ್ಮದ್ ಅಜೀಮುಶನ್, ಮೊಹಮ್ಮದ್ ಮೆರಾಜ್, ಮೊಹಮ್ಮದ್ ಒಸಾಮಾ ಮತ್ತು ಮೊಹ್ಸಿನ್ ಇಬ್ರಾಹಿಂ ಸಯ್ಯದ್ ಅವರಿಗೆ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120 ಬಿ (ಅಪರಾಧ ಪಿತೂರಿ), ಮತ್ತು ಸೆಕ್ಷನ್ 18 (ಪಿತೂರಿ), 20 (ಭಯೋತ್ಪಾದಕ ಗುಂಪು ಅಥವಾ ಸಂಘಟನೆಯ ಸದಸ್ಯರಾಗಿದ್ದಕ್ಕಾಗಿ ಶಿಕ್ಷೆ) ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಮತ್ತು ಸ್ಫೋಟಕ ವಸ್ತುಗಳ ವಿಭಾಗಗಳ ಅಡಿ ದೋಷಿಗಳೆಂದು ಘೋಷಿಸಲಾಗಿದೆ.