ನವದೆಹಲಿ: 2002 ರ ಗುಜರಾತ್ ಗಲಭೆ ಸಂಬಂಧಿಸಿದಂತೆ ಅಂದಿನ ರಾಜ್ಯದ ಸಿಎಂ ನರೇಂದ್ರ ಮೋದಿಗೆ ವಿಶೇಷ ತನಿಖಾ ತಂಡ ( ಎಸ್ಐಟಿ) ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
2002ರಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿಗೆ ಕ್ಲೀನ್‌ಚಿಟ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಗಲಭೆಯಲ್ಲಿ ಹತ್ಯೆಗೀಡಾಗಿದ್ದ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆ ನಡೆಸಿ, ಅರ್ಜಿ ವಜಾಗೊಳಿಸಿದೆ.
ಕಾಂಗ್ರೆಸ್‌ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿ 69 ಮಂದಿಯನ್ನು ಬಲಿ ಪಡೆದಿದ್ದ ಗುಲ್ಬರ್ಗ್ ಸೊಸೈಟಿ ಗಲಭೆ ಕುರಿತಂತೆ ಮೋದಿ ಅವರಿಗೆ ಕ್ಲೀನ್‌ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಜಾಫ್ರಿ ಪತ್ನಿ, 80ರ ವೃದ್ಧೆ ಝಾಕಿರಾ ಜಾಫ್ರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿ ಈ ನಿರ್ಧಾರ ಪ್ರಕಟಿಸಿದೆ.