ನವದೆಹಲಿ: ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಪೆಗಾಸಸ್ ಗೂಢಚಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಪಶ್ಚಿಮ ಬಂಗಾಳ ಸರ್ಕಾರ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಅವರ ನೇತೃತ್ವದಲ್ಲಿ ರಚನೆ ಮಾಡಲಾಗಿದ್ದ ಆಯೋಗದ ಎಲ್ಲ ಪ್ರಕ್ರಿಯೆಗಳಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಅವರಿದ್ದ ತ್ರಿಸದಸ್ಯ ಪೀಠ ಈ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಈ ಪೀಠದಲ್ಲಿದ್ದರು.
ಸುಪ್ರೀಂಕೋರ್ಟ್ ಕೂಡಾ ಪೆಗಾಸಸ್ ತನಿಖೆಗಾಗಿ ನ್ಯಾಯಮೂರ್ತಿ ಆರ್ವಿ ರವೀಂದ್ರನ್ ನೇತೃತ್ವದ ಸಮಿತಿಯೊಂದನ್ನು ರಚನೆ ಮಾಡಿದ್ದು, ರಾಜ್ಯ ಸರ್ಕಾರವೊಂದು ಪ್ರತ್ಯೇಕವಾಗಿ ಈ ಕುರಿತು ತನಿಖೆ ಮಾಡುತ್ತಿದೆ. ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಸುಪ್ರೀಂಕೋರ್ಟ್ಗೆ ಅರ್ಜಿಯೊಂದು ಸಲ್ಲಿಕೆಯಾಗಿತ್ತು.