ಜಹಾಂಗೀರ್ಪುರಿ(ನವದೆಹಲಿ): ಕಳೆದ ಕೆಲ ದಿನಗಳ ಹಿಂದೆ ಹನುಮ ಜಯಂತಿ ವೇಳೆ ಎರಡು ಸಮುದಾಯಗಳ ಮಧ್ಯೆ ಕಲ್ಲು ತೂರಾಟ ನಡೆದು ಹಿಂಸಾಚಾರಕ್ಕೆ ಕಾರಣವಾಗಿದ್ದ ದೆಹಲಿಯ ಜಹಾಂಗೀರ್ಪುರಿಯಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದೆ. ಈ ವೇಳೆ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿದ್ದು, ತೆರವು ಕಾರ್ಯಾಚರಣೆ ನಿಲ್ಲಿಸಿ, ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಿದೆ.
ಕೋಮು ಘರ್ಷಣೆಗೆ ಕಾರಣವಾಗಿರುವ ದೆಹಲಿಯ ಜಹಾಂಗೀರ್ಪುರಿ ಪ್ರದೇಶದಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡ ತೆಗೆದು ಹಾಕಲು ಇಂದು ಬೆಳಗ್ಗೆ ಎನ್ಡಿಎಂಸಿ ಕಾರ್ಯಾಚರಣೆ ಕೈಗೊಂಡಿತ್ತು. ಸ್ಥಳಕ್ಕೆ 9 ಬುಲ್ಡೋಜರ್ಸ್ ರವಾನಿಸಿ, ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸುಮಾರು 400 ಸಿಬ್ಬಂದಿ ಸಹ ನಿಯೋಜನೆ ಮಾಡಲಾಗಿತ್ತು.
ಜಹಾಂಗಿರ್ಪುರಿಯಲ್ಲಿ ಬುಲ್ಡೋಜರ್ಗಳ ಸದ್ದು
ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ದಾವೆ ದಾಖಲಾಗುತ್ತಿದ್ದಂತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ತೆರವು ಕಾರ್ಯಾಚರಣೆ ನಿಲ್ಲಿಸಿ ಯಥಾಸ್ಥಿತಿಗೆ ಆದೇಶ ಹೊರ ಹಾಕಿದೆ. ಗಲಭೆ ಪೀಡಿತ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಡೆಸಲು ಯಾವುದೇ ರೀತಿಯ ನೋಟಿಸ್ ನೀಡಿಲ್ಲ ಎಂದು ವಕೀಲ ಪ್ರಶಾಂತ್ ಭೂಷಣ್, ಸಿಐಜೆ ಎನ್ವಿ ರಮಣ ಗಮನಕ್ಕೆ ತಂದಿದ್ದರು. ಇದರ ಬೆನ್ನಲ್ಲೇ ಈ ರೀತಿಯ ಆದೇಶ ಹೊರಬಿದ್ದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮೇಯರ್ ರಾಜಾ ಇಕ್ಬಾಲ್ ಸಿಂಗ್, ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದಿದ್ದಾರೆ.
ಕಾರ್ಪೊರೇಷನ್ ನಡೆಸಿರುವ ತೆರವು ಕಾರ್ಯಾಚರಣೆಗೆ ಸ್ಥಳೀಯರು, ಉಲಾಮಾ ಇ ಹಿಂದ್ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದ್ದು, ಎರಡು ಸಮುದಾಯಗಳ ನಡುವೆ ಹಿಂಸಾಚಾರ ಉಂಟಾದ ಬಳಿಕ ಈ ಕಾರ್ಯಾಚರಣೆ ನಡೆಸಲಾಗಿದೆ. ಇದರಲ್ಲಿ ರಾಜಕೀಯ ವ್ಯಕ್ತಿಗಳ ಕೈವಾಡವಿದೆ ಎಂದಿದ್ದಾರೆ.
ತೆರವು ಕಾರ್ಯಾಚರಣೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜನೆಗೊಂಡಿರುವ ಪೊಲೀಸ್ ವರಿಷ್ಠಾಧಿಕಾರಿ ದಿಪೇಂದ್ರ ಪಾಠಕ್ ಮಾತನಾಡಿದ್ದು, ಸ್ಥಳದಲ್ಲಿ ಎಲ್ಲವೂ ನಮ್ಮ ಹತೋಟಿಯಲ್ಲಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಶಾಂತಿ ಕಾಪಾಡುವಂತೆ ಸ್ಥಳೀಯರಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.