ಮುಂಬೈ (ಮಹಾರಾಷ್ಟ್ರ): ವಿನಾಯಕ್ ಸಾವರ್ಕರ್ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯಿಂದ ವಿವಾದ ಮುಂದುವರೆದಿದೆ. ಸಾವರ್ಕರ್ ಮೊಮ್ಮಗ ಸತ್ಯಕಿ ಸಾವರ್ಕರ್ ಶನಿವಾರ ರಾಹುಲ್ ಗಾಂಧಿ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಭಾರತ್ ಜೋಡೋ ಯಾತ್ರೆ ನಿಮಿತ್ತ ಗುರುವಾರ ಮಹಾರಾಷ್ಟ್ರದಲ್ಲಿ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ, ಬ್ರಿಟಿಷರಿಗೆ ಸಾವರ್ಕರ್ ಪತ್ರ ಬರೆದು, ಕ್ಷಮೆಯಾಚಿಸಿದ್ದರು. ಅಲ್ಲದೇ, ಸಾವರ್ಕರ್ ಬ್ರಿಟಿಷರಿಂದ ಪಿಂಚಣಿ ಪಡೆದು, ಕಾಂಗ್ರೆಸ್ ವಿರುದ್ಧ ಬ್ರಿಟಿಷರಿಗೆ ಸಹಾಯ ಮಾಡಿದ್ದರು ಎಂದು ಆರೋಪಿಸಿದ್ದರು.
ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ, ಆ ಸಮಯದಲ್ಲಿ ಕೈದಿಗಳ ಹಕ್ಕುಗಳಿಗಾಗಿ ಸಾವರ್ಕರ್ ಪತ್ರ ಬರೆದಿದ್ದರು. ಸಾವರ್ಕರ್ ಒಬ್ಬ ವೀರ, ದೇಶಭಕ್ತ, ಆದರೆ, ಕೆಲವರು ಸಾವರ್ಕರ್ ಹೆಸರಿನಲ್ಲಿ ರಾಜಕೀಯ ಮಾಡಲು ಪ್ರಾರಂಭಿಸಿದ್ದಾರೆ.
ಮಹಾತ್ಮ ಗಾಂಧಿ ಕೂಡ ಬ್ರಿಟಿಷರಿಗೆ ಇದೇ ರೀತಿಯ ಪತ್ರ ಬರೆದಿದ್ದರು. ಗಾಂಧಿ ಅವರನ್ನೂ ರಾಹುಲ್ ದೇಶದ್ರೋಹಿ ಎಂದು ಕರೆಯುವರೇ?. ಇಡೀ ಮಹಾರಾಷ್ಟ್ರ ಸಾವರ್ಕರ್ ಪರವಾಗಿದೆ. ಈಗ ಜನರಿಗೆ ಸುಳ್ಳು ಹೇಳಲು ಪ್ರಯತ್ನಿಸಬೇಡಿ ಎಂದು ಹೇಳಿದ್ದಾರೆ.
ಇದರ ನಡುವೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಗುಜರಾತ್‌ನ ಸೂರತ್ ನಗರದಲ್ಲಿ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಸಾವರ್ಕರ್ ಬಗ್ಗೆ ಹೇಳಿಕೆ ಕುರಿತಂತೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಸಾವರ್ಕರ್ ಕುರಿತು ಗಾಂಧಿಯವರ ಹೇಳಿಕೆಯನ್ನು ಮೂರ್ಖತನದಿಂದ ಕೂಡಿದೆ ಎಂದು ಟೀಕಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯನ್ನೂ ಗೇಲಿ ಮಾಡಿದ ಫಡ್ನವೀಸ್, ಇದು ಯಾವುದೇ ಭಾರತ್ ಜೋಡೋ ಯಾತ್ರೆಯಲ್ಲ. ಭಾರತ್ ಜೋಡೋವನ್ನು ಸರ್ದಾರ್ ಪಟೇಲ್ ಮಾಡಿದ್ದರು. ಕಾಂಗ್ರೆಸ್ ಎಂದಿಗೂ ಸರ್ದಾರ್ ಪಟೇಲ್ ಅವರನ್ನು ಗೌರವಿಸುವುದಿಲ್ಲ. ಸುಭಾಷ್ ಚಂದ್ರ ಬೋಸ್ ಅವರನ್ನೂ ಕಾಂಗ್ರೆಸ್ ಗೌರವಿಸಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸಾವರ್ಕರ್ ಕ್ಷಮಾಪಣೆಯನ್ನ ಟೀಕಿಸಿದ ರಾಹುಲ್ ಗಾಂಧಿ: ಕೈ ನಾಯಕನ ವಿರುದ್ಧ ದೂರು ದಾಖಲು