ಭೋಪಾಲ್(ಮಧ್ಯಪ್ರದೇಶ): ಹಳೆಯ ಕಟ್ಟುಪಾಡುಗಳನ್ನು ಗಾಳಿಗೆ ತೂರಿ ಇಲ್ಲೊಬ್ಬ ಯುವತಿ ತಾಯಿಯಾಗಿದ್ದಾರೆ. ವೀರ್ಯಾಣು ದಾನ ಪಡೆದು, ತಾಯಿಯಾಗಿರುವ ಈ ಧೈರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೇ, ಮನೆಯವರೂ ಸಂಬಂಧಿಗಳೂ ಕೂಡಾ ಈಕೆಯ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.
ಆಲ್ ಇಂಡಿಯಾ ರೇಡಿಯೋದಲ್ಲಿ ಕೆಲಸ ಮಾಡುತ್ತಿರುವ ಮಧ್ಯಪ್ರದೇಶದ ಭೋಪಾಲ್ ಮೂಲದ 37 ವರ್ಷದ ಸಂಯುಕ್ತಾ ಬ್ಯಾನರ್ಜಿ ಪತಿಯಿಲ್ಲದೇ ತಾಯಿಯ ಪಟ್ಟಕ್ಕೆ ಏರಿದ್ದಾರೆ. ಇದರಿಂದಾಗಿ ಸಾಮಾಜಿಕ ವಲಯದಲ್ಲಿ ಸಾಕಷ್ಟು ಚರ್ಚೆಯ ಜೊತೆಗೆ ಬೆಂಬಲವೂ ವ್ಯಕ್ತವಾಗುತ್ತಿದೆ.
ತುಂಬಾ ದಿನಗಳಿಂದ ಸಂಯುಕ್ತಾ ಬ್ಯಾನರ್ಜಿ ಬಹಳ ಸಮಯದಿಂದ ಮಗುವೊಂದನ್ನು ದತ್ತು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಮೂರು ಬಾರಿ ಮಗುವನ್ನು ದತ್ತು ತೆಗೆದುಕೊಳ್ಳಲು ಪ್ರಯತ್ನಿಸಿದ್ದು, ವಿಫಲವಾಗಿದ್ದರು. ಇದರಿಂದಾಗಿ ಆಕೆಯ ವೈದ್ಯರು ಐಸಿಐ ( ICI- Intracervical Insemination) ವಿಧಾನದಿಂದ ತಾಯಿಯಾಗುವಂತೆ ಸಲಹೆ ನೀಡಿದರು. ಈ ಸಲಹೆಯಂತೆ ಸಂಯುಕ್ತಾ ತಾಯಿಯಾಗಿದ್ದಾರೆ.