ಕರ್ನಾಟಕ

karnataka

ETV Bharat / bharat

ರಾಜಸ್ಥಾನದ ತಮ್ಮದೇ ಸರ್ಕಾರದ ವಿರುದ್ಧ 'ಜನಸಂಘರ್ಷ ಯಾತ್ರೆ'ಗಿಳಿದ ಸಚಿನ್ ಪೈಲಟ್

ರಾಜಸ್ಥಾನ ಕಾಂಗ್ರೆಸ್​ ನಾಯಕ ಸಚಿನ್​ ಪೈಲಟ್​ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟ ನಡೆಸುತ್ತಿದ್ದಾರೆ. ಇಂದಿನಿಂದ 5 ದಿನ ಜನಸಂಘರ್ಷ ಯಾತ್ರೆಗೆ ಅವರು ಮುಂದಾಗಿದ್ದಾರೆ.

ರಾಜಸ್ಥಾನ ಸರ್ಕಾರದ ವಿರುದ್ಧ ಸಚಿನ್​ ಪೈಲಟ್
ರಾಜಸ್ಥಾನ ಸರ್ಕಾರದ ವಿರುದ್ಧ ಸಚಿನ್​ ಪೈಲಟ್

By

Published : May 11, 2023, 11:13 AM IST

ಜೈಪುರ (ರಾಜಸ್ಥಾನ):ಕಾಂಗ್ರೆಸ್​ ನಾಯಕತ್ವ ಮತ್ತು ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ವಿರುದ್ಧ ಬಹಿರಂಗವಾಗಿ ಸೆಡ್ಡು ಹೊಡೆಯುವ ಪಕ್ಷದ ನಾಯಕ ಸಚಿನ್​ ಪೈಲಟ್​​ ಮತ್ತೊಂದು ಹೋರಾಟ ನಡೆಸುತ್ತಿದ್ದಾರೆ. ಈ ಹಿಂದಿನ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಇತ್ತೀಚೆಗೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ "ಜನಸಂಘರ್ಷ ಯಾತ್ರೆ" ನಡೆಸುತ್ತಿದ್ದಾರೆ.

ಇಂದಿನಿಂದ ಅಜ್ಮೀರ್​ನಿಂದ "ಜನಸಂಘರ್ಷ ಯಾತ್ರೆ" ಆರಂಭವಾಗಲಿದೆ. 125 ಕಿ.ಮೀ ಕ್ರಮಿಸುವ ಯಾತ್ರೆ ರಾಜಧಾನಿ ಜೈಪುರಕ್ಕೆ 5 ದಿನದಲ್ಲಿ ತಲುಪಲಿದೆ. ಇದು ಭ್ರಷ್ಟಾಚಾರ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಈ ಯಾತ್ರೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ ಸಿದ್ಧತೆ ನಡುವೆ ಪೈಲಟ್​ ಅವರು ಈ ಯಾತ್ರೆ ನಡೆಸುತ್ತಿರುವುದು ಪಕ್ಷಕ್ಕೆ ಇರುಸುಮುರುಸು ತಂದಿದೆ.

ಅಜ್ಮೀರದ ಅಶೋಕ ಉದ್ಯಾನದಿಂದ ಇಂದು (ಗುರುವಾರ) ಜನಸಂಘರ್ಷ ಯಾತ್ರೆ ಆರಂಭವಾಗಲಿದೆ. ಇದಕ್ಕೂ ಮೊದಲು ಪೈಲಟ್​ ಅವರು ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಲಿದ್ದಾರೆ. ಬಳಿಕ ರಾಜ್ಯ ರಾಜಧಾನಿ ಕಡೆಗೆ ನಡೆಯುವ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ ಯಾತ್ರೆ ಕಿಶನ್‌ಗಢದ ತೊಲಮಲ್ ಗ್ರಾಮದಲ್ಲಿ ರಾತ್ರಿ ತಂಗಲಿದೆ ಎಂದು ತಿಳಿದು ಬಂದಿದೆ.

ಯಾತ್ರೆ ಯಾರ ವಿರುದ್ಧವೂ ಅಲ್ಲ:ಈ ಯಾತ್ರೆ ನಡೆಸುತ್ತಿರುವುದು ಯಾರ ವಿರುದ್ಧವೂ ಅಲ್ಲ. ಭ್ರಷ್ಟಾಚಾರ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ವಿಷಯಗಳ ವಿರುದ್ಧ ಮಾತ್ರ ನಮ್ಮ ಹೋರಾಟ ಎಂದು ರಾಜಸ್ಥಾನ ಕಾಂಗ್ರೆಸ್​ ಮಾಜಿ ಮುಖ್ಯಸ್ಥರು ಹೇಳಿದ್ದಾರೆ. ಸರ್ಕಾರ ಈ ವಿಷಯಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ಜನರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಗೆಹ್ಲೋಟ್​ vs ಪೈಲಟ್​:ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಮತ್ತು ಸಚಿನ್​ ಪೈಲಟ್​ ಮಧ್ಯೆ ಬಹಿರಂಗ ಗುದ್ದಾಟ ಸರ್ವೇಸಾಮಾನ್ಯವಾಗಿದೆ. ಕಳೆದೆರಡು ವರ್ಷಗಳಿಂದ ಇಬ್ಬರೂ ಸಾರ್ವಜನಿಕವಾಗಿ ಜಗಳವಾಡುತ್ತಿದ್ದಾರೆ. 2020 ರಲ್ಲಿ ಪೈಲಟ್ ರಾಜ್ಯ ನಾಯಕತ್ವ ಬದಲಾವಣೆಗಾಗಿ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದರು. ಆದಾಗ್ಯೂ, ಗೆಹ್ಲೋಟ್ ಹೆಚ್ಚಿನ ಬೆಂಬಲದಿಂದ ಬಂಡಾಯವನ್ನು ಎದುರಿಸಿದರು. ಇದಾದ ಬಳಿಕ ಪೈಲಟ್ ಮತ್ತು ಅವರ ಕೆಲವು ನಿಷ್ಠಾವಂತರನ್ನು ಸಚಿವ ಸಂಪುಟದಿಂದ ಹೊರಹಾಕಲಾಯಿತು.

ಒಂದು ದಿನದ ನಿರಶನ:ಮಾಜಿ ಡಿಸಿಎಂ ಸಚಿನ್​ ಪೈಲಟ್​ ಅವರು ಕಳೆದ ತಿಂಗಳು ಸರ್ಕಾರದ ವಿರುದ್ಧ ಒಂದು ದಿನದ ನಿರಶನ ನಡೆಸಿದ್ದರು. ಬಿಜೆಪಿ ನಾಯಕಿ, ಮಾಜಿ ಸಿಎಂ ವಸುಂಧರಾ ರಾಜೇ ಅವರ ನೇತೃತ್ವದ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಗೆಹ್ಲೋಟ್​ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ, ತಮ್ಮ ಸರ್ಕಾರದ ವಿರುದ್ಧವೇ ಧರಣಿ ನಡೆಸಿದ್ದರು. ಇದನ್ನು ಕಾಂಗ್ರೆಸ್​ ಹೈಕಮಾಂಡ್​ ವಿರೋಧಿಸಿದ್ದರೂ, ಲೆಕ್ಕಿಸದೇ ಪೈಲಟ್​ ನಿರಶನ ನಡೆಸಿ ಸೆಡ್ಡು ಹೊಡೆದಿದ್ದರು.

ಇದನ್ನೂ ಓದಿ:ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಕ್ರಮಕ್ಕೆ ಒತ್ತಾಯ: ಒಂದು ದಿನದ ಉಪವಾಸ ಕುಳಿತ ಸಚಿನ್ ಪೈಲಟ್

ABOUT THE AUTHOR

...view details