ಭಾರತದಲ್ಲಿ, ಅದರಲ್ಲಿಯೂ ಹಿಂದೂ ಧರ್ಮದಲ್ಲಿ ಮಾಂಗಲ್ಯ ಸರ ಅಥವಾ ಮಂಗಳಸೂತ್ರಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದ್ದು, ಪವಿತ್ರ ಸ್ಥಾನ ನೀಡಲಾಗಿದೆ. ಆದರೆ ಅಂತಾರಾಷ್ಟ್ರೀಯ ಖ್ಯಾತಿಯ ಭಾರತದ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ ಅವರು ಸಿದ್ಧಪಡಿಸಿರುವ ಹೊಸ ಆಭರಣಗಳ ಜಾಹೀರಾತಿನ ಫೋಟೋಗಳನ್ನು ಕಂಡ ನೆಟ್ಟಿಗರು ಛೀ.. ತೂ ಎಂದು ಕಿಡಿಕಾರಿದ್ದಾರೆ.
ವಿಭಿನ್ನ ಬಣ್ಣ-ವಿನ್ಯಾಸವುಳ್ಳ 'ಸಬ್ಯಸಾಚಿ' ಎಂಬ ಫ್ಯಾಶನ್ ಬ್ರ್ಯಾಂಡ್ ಎಲ್ಲರಿಗೂ ಚಿರಪರಿಚಿತ. ಆದರೆ, ಸಬ್ಯಸಾಚಿ ಮುಖರ್ಜಿ ಅವರ ಈ ಬ್ರ್ಯಾಂಡ್ ಬಾಲಿವುಡ್ ಲೋಕದಲ್ಲಿ ಹೆಚ್ಚು ಕೇಳಿಬರುತ್ತದೆ. ಸಿಕ್ಕಾಪಟ್ಟೆ ದುಬಾರಿಯಾದರೂ ಬಾಲಿವುಡ್ ಸೆಲೆಬ್ರಿಟಿಗಳು ಸಬ್ಯಸಾಚಿ ಉಡುಪುಗಳ ಮೊರೆ ಹೋಗುತ್ತಾರೆ. ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ- ರಣವೀರ್ ಸಿಂಗ್, ಪ್ರಿಯಾಂಕ ಚೋಪ್ರಾ-ನಿಕ್ ಜೋನಾಸ್ ಸೇರಿ ಹಲವು ಸ್ಟಾರ್ಗಳು ತಮ್ಮ ಮದುವೆಯಲ್ಲಿ ಸಬ್ಯಸಾಚಿ ಡಿಸೈನರ್ ಡ್ರೆಸ್ಗಳನ್ನೇ ಧರಿಸಿದ್ದನ್ನ ನಾವು ನೋಡಿದ್ದೇವೆ.
ಈ ಫ್ಯಾಶನ್ ಬ್ರ್ಯಾಂಡ್ನ ಮಾಲೀಕ ಸಬ್ಯಸಾಚಿ ಮುಖರ್ಜಿ ಅವರು 'ಇಂಟಿಮೇಟ್ ಫೈನ್ ಜ್ಯುವೆಲ್ಲರಿ' ಸಂಗ್ರಹವನ್ನು ಆರಂಭಿಸಿದ್ದು, 'ದಿ ರಾಯಲ್ ಬೆಂಗಾಲ್ ಮಂಗಳಸೂತ್ರ' (The Royal Bengal Mangalsutra) ಹೆಸರಿನ ಮಾಂಗಲ್ಯ ಸರದ ಜಾಹೀರಾತುಗಳ ಸರಣಿಯನ್ನು ಸಬ್ಯಸಾಚಿ ತನ್ನ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ಪ್ರಕಟ ಮಾಡಿದೆ.
ಒಳ ಉಡುಪುಗಳನ್ನು ತೊಟ್ಟು ಮಂಗಳಸೂತ್ರ ಧರಿಸಿರುವ ರೂಪದರ್ಶಿಗಳನ್ನು ಈ ಜಾಹೀರಾತಿನಲ್ಲಿ ಕಾಣಬಹುದಾಗಿದೆ. ಅಷ್ಟೆ ಅಲ್ಲ, ಆಭರಣಗಳನ್ನು ಧರಿಸಿ ಅರೆನಗ್ನ ಸ್ಥಿತಿಯಲ್ಲಿ ಗಂಡು-ಹೆಣ್ಣು ಭಿನ್ನ ಭಂಗಿಯಲ್ಲಿ ಪೋಸ್ಟ್ ಕೊಟ್ಟಿರುವುದು ಕಂಡು ಬಂದಿದೆ.