ಧರ್ಮಶಾಲಾ(ಹಿಮಾಚಲ ಪ್ರದೇಶ):ಕಳೆದ ಫೆಬ್ರವರಿ ತಿಂಗಳಿಂದ ರಷ್ಯಾ-ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಉಭಯ ದೇಶಗಳ ಮಿಲಿಟರಿ ಸಿಬ್ಬಂದಿ ಹಾಗು ಉಕ್ರೇನ್ನ ಸಾಕಷ್ಟು ಜನರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ದೊಡ್ಡ ಸಂಖ್ಯೆಯ ಜನರು ನಿರ್ಗತಿಕರಾಗಿದ್ದಾರೆ. ಇದರ ಮಧ್ಯೆ ರಷ್ಯಾದಲ್ಲಿ ಹುಟ್ಟಿ ಬೆಳೆದ ಯುವಕ ಹಾಗೂ ಉಕ್ರೇನ್ನಲ್ಲಿ ವಾಸವಿದ್ದ ಯುವತಿ ಭಾರತಕ್ಕೆ ಆಗಮಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಈ ವಿಶೇಷ ಕಲ್ಯಾಣ ನಡೆಯಿತು.
ಧರ್ಮಶಾಲಾದಲ್ಲಿ ಉಕ್ರೇನ್ ಯುವತಿ ಅಲೋನಾ ಬುರ್ಮಾಕ್(28) ಹಾಗೂ ರಷ್ಯಾದ ಸೆರ್ಜಿ ನೊವೆಕಿನ್(37) ವಿವಾಹವಾದರು. ಭಾರತದ ವಿಶೇಷ ವಿವಾಹ ಕಾಯ್ದೆಯ ಅನುಸಾರ, ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಬಳಿಕ ಮಾತನಾಡುತ್ತಾ, 'ಪರಸ್ಪರ ಪ್ರೀತಿ ಮಾಡಿ, ಯುದ್ಧ ಬೇಡ' ಎಂದು ಉಕ್ರೇನ್ ಹಾಗೂ ರಷ್ಯಾ ಸರ್ಕಾರಕ್ಕೆ ಮನವಿ ಮಾಡಿಕೊಂಡರು.