ಹೈದರಾಬಾದ್: ಜೂನ್ 2ರಂದು ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದ ಸಮೀಪ ತ್ರಿವಳಿ ರೈಲು ದುರಂತ ಸಂಭವಿಸಿತ್ತು. ದೇಶದ ಕಂಡ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಈ ಅಪಘಾತ ಪ್ರಕರಣ ಕೂಡ ಒಂದಾಗಿದೆ. ಕೋರಮಂಡಲ್ ಎಕ್ಸ್‌ಪ್ರೆಸ್ ನಿಂತಿದ್ದ ಸರಕು ರೈಲಿಗೆ ಗುದ್ದಿತ್ತು. ನಂತರ ಇದರ ಕೆಲವು ಹಳಿತಪ್ಪಿದ ಕೋಚ್‌ಗಳು ಪಕ್ಕದ ಹಳಿಗಳ ಮೇಲೆ ಬಿದ್ದಿದ್ದವು. ಇದರಿಂದ ಎದುರಿಗೆ ಬರುತ್ತಿದ್ದ ಯಶವಂತಪುರ - ಹೌರಾ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಕನಿಷ್ಠ 296 ಜನರು ಸಾವನ್ನಪ್ಪಿದ್ದರೆ, 1,200ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದರು. ಈ ದುರಂತ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಜೂನ್ 3 ರಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೈನ್ ಅವರು, ಬ್ರೀಫಿಂಗ್‌ನಲ್ಲಿ ಒಂದು ಜನರಲ್ ಕೋಚ್ ಹಾನಿಗೊಳಗಾದರೆ ಮತ್ತೊಂದು ಕೋಚ್ ಅದರ ಮೇಲೆ ಹತ್ತಿದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಸಮಯ ತೆಗೆದುಕೊಳ್ಳುತ್ತಿದೆ. ಕನಿಷ್ಠ 233 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 900 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಾಲಸೋರ್, ಮಯೂರ್‌ಭಂಜ್, ಕಟಕ್ ಎಸ್‌ಸಿಬಿ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪ್ರಾಥಮಿಕ ವರದಿ ಆಧರಿಸಿ ಮಾಹಿತಿ ನೀಡಿದ್ದರು.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಜೂನ್ 3 ರಂದು ಸ್ಥಳಕ್ಕೆ ಭೇಟಿ ನೀಡಿದ್ದರು. ವೈಷ್ಣವ್ ಅವರು ಕಟಕ್, ಭುವನೇಶ್ವರ್ ಮತ್ತು ಕೋಲ್ಕತ್ತಾದಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದರು. ಭಾರತೀಯ ರೈಲ್ವೆ ಈಗಾಗಲೇ ಪರಿಹಾರ ಘೋಷಣೆಗಳನ್ನು ಮಾಡಿದೆ ಮತ್ತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಲಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದರು. ಅಷ್ಟೇ ಅಲ್ಲ ಇಡೀ ರಕ್ಷಣಾ ಕಾರ್ಯಾಚರಣೆ ಮುಗಿಯುವರೆಗೂ ಸ್ಥಳದಲ್ಲೇ ಇದ್ದು, ಹಳಿ ದುರಸ್ತಿ ಬಳಿಕ ಮೊದಲ ಟ್ರೈನ್ ಸಂಚಾರ ಆರಂಭಿಸಿಯೇ ದೆಹಲಿಯತ್ತ ಪ್ರಯಾಣ ಬೆಳೆಸಿದ್ದರು.
ಜೂನ್ 3 ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ದುಮುರ್ಜಾಲಾದ ಹೌರಾ ಜಿಲ್ಲೆಯ ಹೆಲಿಪ್ಯಾಡ್‌ನಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹೊರಟು ಬಾಲಸೋರ್‌ಗೆ ತೆರಳಿದ್ದರು. ಅಪಘಾತದ ಸ್ಥಳದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಮಾತಿನ ಚಕಮಕಿ ನಡೆಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 3 ರಂದು ಪರಿಶೀಲನಾ ಸಭೆ ನಡೆಸಿದರು. ಇದಾದ ಇಂದು ದಿನದ ನಂತರ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದರು. ಪರಿಶೀಲನಾ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ರೈಲ್ವೆ ಸಚಿವಾಲಯ, ಪಿಎಂಒ ಮತ್ತು ಎನ್‌ಡಿಆರ್‌ಎಫ್‌ನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಜೂನ್ 4 ರಂದು ಅಶ್ವಿನಿ ವೈಷ್ಣವ್ ಅವರು ರೈಲು ದುರಂತದ ಮೂಲ ಕಾರಣವನ್ನು ಕಂಡುಹಿಡಿಯಲಾಗಿದೆ ಎಂದು ತಿಳಿಸಿದ್ದರು. ಅದಕ್ಕೆ ಕಾರಣರಾದವರನ್ನು ಗುರುತಿಸಿದ್ದೇವೆ ಎಂದು ಹೇಳಿದ್ದರು. ನಂತರ ರೈಲ್ವೆ ಮಂಡಳಿ ಈ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಈ ಮಧ್ಯೆ, ಮೃತ ದೇಹಗಳು ಗುರುತಿಸಲಾಗದಷ್ಟು ವಿರೂಪಗೊಂಡಿದ್ದರಿಂದ 150 ಕ್ಕೂ ಹೆಚ್ಚು ಮಂದಿಯ ಸಂರಕ್ಷಿಸಲ್ಪಟ್ಟ ಮೃತ ದೇಹಗಳನ್ನು ಗುರುತಿಸುವಲ್ಲಿ ಒಡಿಶಾ ಸರ್ಕಾರವು ದೊಡ್ಡ ಸವಾಲನ್ನು ಎದುರಿಸಿತು.