ಡೆಹ್ರಾಡೂನ್(ಉತ್ತರಾಖಂಡ): ಉತ್ತರಾಖಂಡ ಜಿಲ್ಲೆಯಲ್ಲಿ ಕಳೆದ 17 ದಿನಗಳಿಂದ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗಿದ್ದ ಆಧುನಿಕ ಯಂತ್ರದಿಂದ ಕೆಲಸ ಸಫಲವಾಗಲಿಲ್ಲ. ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಇದೀಗ ಸಾಂಪ್ರದಾಯಿಕ ರ‍್ಯಾಟ್ ಹೋಲ್ ಮೈನಿಂಗ್ ವಿಧಾನದ ಮೊರೆ ಹೋಗಿದ್ದಾರೆ.
ರ‍್ಯಾಟ್ ಹೋಲ್ ಮೈನಿಂಗ್ ವಿಧಾನವನ್ನು ಹೆಚ್ಚಾಗಿ ಮೇಘಾಲಯದಲ್ಲಿ ಬಳಸಲಾಗುತ್ತಿದೆ. ಅಲ್ಲಿ ಸಣ್ಣ ಪ್ರಮಾಣದ ಕಲ್ಲಿದ್ದಲು ಗಣಿಗಾರಿಕೆಗೆ ಈ ವಿಧಾನದ ಮೂಲಕ ಕಾರ್ಮಿಕರೇ ರಂಧ್ರಗಳನ್ನು ಕೊರೆಯುತ್ತಾರೆ. ಇದೀಗ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಕುಸಿದಿರುವ ಭಾಗದಲ್ಲಿ ಅಡ್ಡಲಾಗಿ ಕೊರೆಯಲು ಇದೇ ರ‍್ಯಾಟ್ ಹೋಲ್ ಮೈನಿಂಗ್ ತಂತ್ರ ಅನ್ವಯಿಸಲು ಟ್ರೆಂಚ್‌ಲೆಸ್ ಎಂಜಿನಿಯರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ನವಯುಗ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಕನಿಷ್ಠ 12 ತಜ್ಞರನ್ನು ಕರೆಸಿಕೊಳ್ಳಲಾಗಿದೆ. ಈ ತಜ್ಞರು ದೆಹಲಿ, ಝಾನ್ಸಿ ಮತ್ತು ದೇಶದ ಇತರ ಭಾಗಗಳಿಂದ ಬಂದಿದ್ದಾರೆ.
"ತಜ್ಞರು ತಮ್ಮ ಕೈಯಿಂದಲೇ ಕನಿಷ್ಠ 10ರಿಂದ 12 ಮೀಟರ್ ಕೊರೆಯಲಿದ್ದಾರೆ. ಅವರು ಹೆಚ್ಚಂದ್ರೆ ಎರಡು ಉಪಕರಣಗಳನ್ನು ಮಾತ್ರ ಬಳಸುತ್ತಾರೆ. ಕಲ್ಲು, ಮಣ್ಣು, ಕಬ್ಬಿಣದ ಅಡೆತಡೆಗಳನ್ನು ಕತ್ತರಿಸಲು ಗ್ಯಾಸ್ ಕಟ್ಟರ್ಗಳನ್ನು, ಕೈಯಲ್ಲಿ ಹಿಡಿಯುವ ಡ್ರಿಲ್ಲಿಂಗ್ ಯಂತ್ರಗಳನ್ನು ಬಳಕೆ ಮಾಡುತ್ತಾರೆ" ಎಂದು ಅಧಿಕಾರಿಯೊಬ್ಬರು ಹೇಳಿದರು.
ಉತ್ತರಾಖಂಡ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಮತ್ತು ರಕ್ಷಣಾ ಕಾರ್ಯಾಚರಣೆಯ ರಾಜ್ಯ ನೋಡಲ್ ಅಧಿಕಾರಿ ನೀರಜ್ ಖೈರ್ವಾಲ್ ನೀಡಿರುವ ಮಾಹಿತಿ ಪ್ರಕಾರ, ರ‍್ಯಾಟ್ ಹೋಲ್ ಮೈನಿಂಗ್ ತಂತ್ರವನ್ನು ಅನುಸರಿಸಿ ನುರಿತ ಕಾರ್ಮಿಕರ ತಂಡವು ತಮ್ಮ ಕೈಯಿಂದ ಅವಶೇಷಗಳನ್ನು ತೆಗೆದುಹಾಕುತ್ತದೆ. ಅವರು ಅವಶೇಷಗಳನ್ನು ತೆಗೆದುಹಾಕುತ್ತಿದ್ದಂತೆ, ಸುರಂಗದ ಪೈಪ್ (800-ಮಿ.ಮೀ) ಯಂತ್ರವು ಅವಶೇಷಗಳ ಮೂಲಕ ಕ್ರಮೇಣ ತಳ್ಳಲ್ಪಡುತ್ತದೆ" ಎಂದರು.