ನವದೆಹಲಿ : ಅಯೋಧ್ಯೆಯಲ್ಲಿ ಮೂರು ಅಂತಸ್ತಿನಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ನೆಲ ಮಹಡಿ ನಿರ್ಮಾಣ ಕಾಮಗಾರಿ ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯವಾಗಲಿದೆ. ಜನವರಿ 22 ರಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುವ ನಿರೀಕ್ಷೆ ಇದೆ ಎಂದು ದೇವಾಲಯ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ ಅವರು, "ಜನವರಿ 20 ರಿಂದ 24 ರ ನಡುವೆ ನಡೆಯುವ 'ಪ್ರಾಣ ಪ್ರತಿಷ್ಠಾಪನೆ' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ನಿರೀಕ್ಷೆ ಇದೆ. ಆದ್ರೆ, ಅಂತಿಮ ದಿನಾಂಕವನ್ನು ಪ್ರಧಾನಿ ಕಾರ್ಯಾಲಯ ತಿಳಿಸಬೇಕಾಗಿದೆ" ಎಂದು ಹೇಳಿದರು.
ಪ್ರತಿ ವರ್ಷ ರಾಮನವಮಿಯ ದಿನದಂದು ಗರ್ಭಗುಡಿಯಲ್ಲಿರುವ ದೇವರ ಮೂರ್ತಿಯ ಮೇಲೆ ಸೂರ್ಯನ ಕಿರಣಗಳು ಕ್ಷಣ ಮಾತ್ರದಲ್ಲಿ ಬೀಳುವಂತೆ ಮಾಡುವ ಉಪಕರಣವನ್ನು ದೇವಾಲಯದ 'ಶಿಖರ'ದ ಮೇಲೆ ಸ್ಥಾಪಿಸುವ ಕೆಲಸ ನಡೆಯುತ್ತಿದೆ. ಈ ವಿಶಿಷ್ಟ ಉಪಕರಣದ ವಿನ್ಯಾಸವನ್ನು ಬೆಂಗಳೂರಿನಲ್ಲಿ ಮಾಡಲಾಗುತ್ತಿದೆ. ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ಪುಣೆಯ ಒಂದು ಸಂಸ್ಥೆ ಜಂಟಿಯಾಗಿ ಇದಕ್ಕಾಗಿ ಗಣಕೀಕೃತ ಕಾರ್ಯಕ್ರಮವನ್ನು ರಚಿಸಿದೆ ಎಂದು ಮಾಹಿತಿ ನೀಡಿದರು.
ದೇವಸ್ಥಾನದ ನೆಲ ಅಂತಸ್ತಿನ ಕಾಮಗಾರಿಯನ್ನು ಡಿಸೆಂಬರ್ 2023 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದ್ದು, ಈ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು. ಜ್ಞಾನವುಳ್ಳ ಸಂತರು ಮತ್ತು ಋಷಿಗಳೊಂದಿಗೆ ಸಮಾಲೋಚಿಸಿ 'ಪ್ರಾಣ ಪ್ರತಿಷ್ಠಾಪನೆ'ಯನ್ನು ಪ್ರಾರಂಭಿಸಲಾಗುವುದು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಈ ಯೋಜಿತ ಸಮಾರಂಭದ ವಿವರಗಳ ಬಗ್ಗೆ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.