ಹೈದರಾಬಾದ್: ಅಯೋಧ್ಯೆ ಶ್ರೀರಾಮಮಂದಿರದ ಉದ್ಘಾಟನಾ ಸಮಾರಂಭ ಸಮೀಪಿಸುತ್ತಿದೆ. ಇಡೀ ದೇಶ ಐತಿಹಾಸಿಕ ಕಾರ್ಯಕ್ರಮವನ್ನು ಎದುರು ನೋಡುತ್ತಿದೆ. ರಾಮ ಲಲ್ಲಾನ ಪ್ರಾಣಪ್ರತಿಷ್ಠೆಗೆ ಇನ್ನು 11 ದಿನಗಳಷ್ಟೇ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶೇಷ ಆಡಿಯೋ ಸಂದೇಶ ನೀಡಿದ್ದಾರೆ. ಇಂದಿನಿಂದ ವಿಶೇಷ ದಾರ್ಮಿಕ ವ್ರತಾಚರಣೆ ಅನುಸರಿಸುವುದಾಗಿ ಅವರು ಬಹಿರಂಗಪಡಿಸಿದ್ದಾರೆ.
"ಈ ಮಹತ್ವದ ಸಂದರ್ಭಕ್ಕೆ ಸಾಕ್ಷಿಯಾಗುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನಾನು ಹಿಂದೆಂದೂ ಇಷ್ಟೊಂದು ಉತ್ಸುಕನಾಗಿರಲಿಲ್ಲ. ಜೀವನದಲ್ಲಿ ಇದೇ ಮೊದಲ ಬಾರಿಗೆ ಅಂತಹ ವಿಶೇಷ ಭಾವನೆಗಳನ್ನು ಅನುಭವಿಸುತ್ತಿದ್ದೇನೆ. ಇಂಥ ಅದ್ಭುತ ಸಮಯದಲ್ಲಿ ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ವ್ಯಕ್ತಪಡಿಸುವುದು ಕಷ್ಟ" ಎಂದು ಮೋದಿ ಹೇಳಿದ್ದಾರೆ.
ಹಿಂದೂ ಶಾಸ್ತ್ರಗಳ ಪ್ರಕಾರ, ದೇವಾಲಯಗಳಲ್ಲಿ ಪ್ರಾಣಪ್ರತಿಷ್ಠಾನೆಯ ಮೊದಲು ಕೆಲವು ನಿಯಮಗಳನ್ನು ಅನುಸರಿಸಬೇಕಿರುತ್ತದೆ. ಕೆಲವು ಹಿಂದೂ ಪುರಾಣಗಳು ಈ ಸಂದರ್ಭಕ್ಕೂ ಮೊದಲು ಉಪವಾಸ ವ್ರತಾಚರಣೆಯನ್ನು ಉಲ್ಲೇಖಿಸಿವೆ. ಬ್ರಹ್ಮ ಮುಹೂರ್ತದ ಸಮಯದಲ್ಲಿ ಎಚ್ಚರಗೊಳ್ಳುವ ನಿಯಮಗಳನ್ನು ವಿವರಿಸಲಾಗಿದೆ. ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ಆಹಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಿರುತ್ತದೆ. ಇದೀಗ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಪ್ರಧಾನಿ ಮೋದಿ ಈ ಎಲ್ಲಾ ನಿಯಮಗಳನ್ನು ಅನುಸರಿಸಲು ನಿರ್ಧರಿಸಿದ್ದಾರೆ.